ತೆರಿಗೆ ಬಾಕಿ ಉಳಿಸಿಕೊಂಡ ಖ್ಯಾತನಾಮರಲ್ಲಿ ಸಚಿನ್, ಅಂಬಾನಿ..!
ಮುಂಬೈ, ಸೋಮವಾರ, 25 ಜನವರಿ 2010( 14:57 IST )
ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಉದ್ಯಮಿ ಅನಿಲ್ ಅಂಬಾನಿ, ಬಾಲಿವುಡ್ ಸಿಂಗರ್ ಶಂಕರ್ ಮಹದೇವನ್, ತ್ರಿಪುರಾ ರಾಜ್ಯಪಾಲ ಡಿ.ವೈ. ಪಾಟೀಲ್ ಸೇರಿದಂತೆ ವಾಹನಗಳ ತೆರಿಗೆ ಬಾಕಿ ಉಳಿಸಿಕೊಂಡಿರುವ 75,000 ಮಾಲಕರಿಗೆ ನವಿ ಮುಂಬೈ ಮಹಾನಗರ ಪಾಲಿಕೆ (ಎನ್ಎಂಎಂಸಿ) ನೊಟೀಸ್ ಜಾರಿ ಮಾಡಿದೆ.
ನವಿ ಮುಂಬೈಯಲ್ಲಿ ವಾಹನಗಳ ನೋಂದಣಿ ಮಾಡಿಸಿ ತೆರಿಗೆ ಪಾವತಿಸಲು ವಿಫಲರಾಗಿರುವ ಎಲ್ಲರಿಗೂ ಮಹಾನಗರ ಪಾಲಿಕೆ ನೊಟೀಸ್ ಜಾರಿ ಮಾಡಿದ್ದು, ಅದರಲ್ಲಿ ಖ್ಯಾತನಾಮರೂ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಚಿನ್ ಖರೀದಿಸಿದ್ದ ಐಷಾರಾಮಿ ಕಾರೊಂದಕ್ಕೆ ಇನ್ನೂ ತೆರಿಗೆ ಪಾವತಿಸಿಲ್ಲ. ತೆರಿಗೆ ಉಳಿಸಿಕೊಂಡಿದ್ದಕ್ಕಾಗಿ ಅಂಬಾನಿ ಮತ್ತು ಮಹದೇವನ್ ಅವರಿಗೆ ಕೂಡ ದಂಡ ಹಾಕಲಾಗಿದೆ.
ನವಿ ಮುಂಬೈಯಲ್ಲಿ ಕಡಿಮೆ ತೆರಿಗೆ ಪಾವತಿಯಿರುವುದರಿಂದ ಹೆಚ್ಚಿನವರು ಇಲ್ಲಿ ವಾಹನಗಳನ್ನು ನೋಂದಣಿ ಮಾಡಿಸುತ್ತಾರೆ. ಇದೇ ವಾಹನಗಳನ್ನು ಮುಂಬೈಯಲ್ಲಿ ನೋಂದಣಿ ಮಾಡಿಸಿದಲ್ಲಿ ಹೆಚ್ಚಿನ ತೆರಿಗೆ ನೀಡಬೇಕಾಗುತ್ತದೆ. ಇಲ್ಲಿ ತಮ್ಮ ವಾಹನದ ಒಟ್ಟು ಮೊತ್ತದ ಶೇ.1ಕ್ಕಿಂತಲೂ ಕಡಿಮೆ ತೆರಿಗೆಯನ್ನು ವಾಹನದ ಮಾಲಕರು ಪಾವತಿಸಿದರೆ ಸಾಕಾಗುತ್ತದೆ. ಆದರೆ ಅದನ್ನೂ ಪಾವತಿಸುವುದಿಲ್ಲ ಎಂದು ಅಧಿಕಾರಿಗಳು ವಿವರಣೆ ನೀಡಿದ್ದಾರೆ.
ಸುಮಾರು 75,000 ಮಂದಿ 1.5 ಲಕ್ಷಕ್ಕೂ ಹೆಚ್ಚು ವಾಹನಗಳ ಅಂದಾಜು 50 ಕೋಟಿ ರೂಪಾಯಿಗಳಷ್ಟು ತೆರಿಗೆ ಪಾವತಿ ಮಾಡಬೇಕಿದೆ.
ಸಚಿನ್ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕ ಅವಧಿಯಲ್ಲಿ ವರಮಾನ ತೆರಿಗೆಯಾಗಿ 1.5 ಕೋಟಿ ರೂಪಾಯಿಗಳನ್ನು ಪಾವತಿಸಿದ್ದರು ಎಂದು ಕೆಲವೇ ದಿನಗಳ ಹಿಂದಷ್ಟೇ ಕೇಂದ್ರ ಹಣಕಾಸು ಸಚಿವಾಲಯ ಹೇಳಿತ್ತು.
ದೇಶದ ಅಗ್ರ 500 ತೆರಿಗೆ ಪಾವತಿದಾರರಲ್ಲಿ ಮಾಸ್ಟರ್ ಬ್ಲಾಸ್ಟರ್ 115ನೇ ಸ್ಥಾನದಲ್ಲಿದ್ದಾರೆ.