ಮುಂಬೈ ಹತ್ಯಾಕಾಂಡದ ಹಿಂದೆ ಪಾಕಿಸ್ತಾನ ಮೂಲದ ಉಗ್ರ ಡೇವಿಡ್ ಕೋಲ್ಮನ್ ಹೆಡ್ಲಿ ಪಾತ್ರವಿದೆ ಎಂದು ಅಮೆರಿಕಾ ಹೇಳಿದ ನಂತರ ಆತನನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂಬ ಮನವಿಯನ್ನು ತಳ್ಳಿ ಹಾಕಿದ್ದ ಅಮೆರಿಕಾ ಇದೀಗ ಆತನ ಭಾವಚಿತ್ರಗಳನ್ನು ನವದೆಹಲಿಗೆ ನೀಡಿದೆ.
ಅಮೆರಿಕಾವು ಭಾರತಕ್ಕೆ ಹಸ್ತಾಂತರಿಸುವ ಈ ಚಿತ್ರದಲ್ಲಿ ಹೆಡ್ಲಿ ಕಂದು ಬಣ್ಣದಲ್ಲಿದ್ದು, ಮೀಸೆ ಬೋಳಿಸಿಕೊಂಡಿದ್ದಾನೆ. ನೀಲಿ ಬಣ್ಣದ ಹಿನ್ನೆಲೆಯಲ್ಲಿ ತೆಗೆಯಲಾಗಿರುವ ಚಿತ್ರದಲ್ಲಿ ಆತನ ಕಣ್ಣುಗಳು ಹಸಿರು ಬಣ್ಣದಿಂದ ಕೂಡಿವೆ.
PR
ದಾವೂದ್ ಗಿಲಾನಿ ಎಂಬ ಹೆಸರನ್ನು 2006ರಲ್ಲಿ ಡೇವಿಡ್ ಕೋಲ್ಮನ್ ಹೆಡ್ಲಿ ಎಂದು ಬದಲಾಯಿಸಿಕೊಂಡಿದ್ದ ಪಾಕಿಸ್ತಾನಿ ಮೂಲದ ಅಮೆರಿಕಾ ಪ್ರಜೆ ಹೆಡ್ಲಿ 2008ರ ನವೆಂಬರ್ ತಿಂಗಳ ಭಯಾನಕ ಮುಂಬೈ ದಾಳಿಯಲ್ಲಿ ಪ್ರಮುಖ ಆರೋಪಿ ಎಂದು ಚಿಕಾಗೋ ನ್ಯಾಯಾಲಯದಲ್ಲಿ ಅಮೆರಿಕಾ ಆರೋಪಿಸಿದೆ.
ಈ ಹಿನ್ನೆಲೆಯಲ್ಲಿ ಆತನನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಮಾಡಿದ್ದ ಮನವಿಯನ್ನು ಕಾನೂನುಗಳ ನೆಲೆಗಟ್ಟಿನಲ್ಲಿ ಸಾಧ್ಯವಿಲ್ಲ ಎಂದು ಅಮೆರಿಕಾ ಹೇಳಿತ್ತು. ಆದರೆ ಭಾರತೀಯ ತನಿಖಾ ದಳಗಳಿಗೆ ಆತನನ್ನು ವಿಚಾರಣೆ ನಡೆಸಲು ಅನುಮತಿ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದ್ದು, ಇನ್ನೂ ಅಮೆರಿಕಾ ತನ್ನ ಹಸಿರು ನಿಶಾನೆ ತೋರಿಸಿಲ್ಲ.
ಭಯೋತ್ಪಾದಕ ಸಂಘಟನೆ ಲಷ್ಕರ್ ಇ ತೋಯ್ಬಾ ಜತೆ ಸಂಬಂಧ ಹೊಂದಿದ್ದಾನೆ ಎಂಬ ಆರೋಪ ಹೊತ್ತಿರುವ ಹೆಡ್ಲಿ, ಮುಂಬೈ ದಾಳಿಗೂ ಮೊದಲು ಭಾರತದ ಹಲವು ಪ್ರಮುಖ ಪ್ರದೇಶಗಳಿಗೆ ಭೇಟಿ ನೀಡಿ ಫೋಟೋ ಮತ್ತು ವೀಡಿಯೋ ಚಿತ್ರೀಕರಣ ನಡೆಸಿದ್ದ ಎಂದು ತನಿಖೆಗಳಿಂದ ಬಹಿರಂಗವಾಗಿತ್ತು.
ಪಾಕಿಸ್ತಾನಕ್ಕೆ ಹೋಗುವ ಯೋಚನೆಯಲ್ಲಿದ್ದ ಹೆಡ್ಲಿ ಫಿಲಡೆಲ್ಫಿಯಾ ವಿಮಾನ ಹತ್ತುವ ಮೊದಲು ಓಹಾರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2009ರ ಅಕ್ಟೋಬರ್ ತಿಂಗಳಲ್ಲಿ ಅಮೆರಿಕಾದ ಎಫ್‌ಬಿಐ ಭಯೋತ್ಪಾದನಾ ನಿಗ್ರಹ ಜಂಟಿ ಕಾರ್ಯಾಚರಣೆ ಪಡೆಯ ಕೈಗೆ ಸಿಕ್ಕಿ ಬಿದ್ದಿದ್ದ.
ಮುಂಬೈ ದಾಳಿಯಲ್ಲದೆ, 2005ರಲ್ಲಿ ಪ್ರವಾದಿ ಮಹಮ್ಮದ್ ಅವರ ಕಾರ್ಟೂನ್‌ಗಳನ್ನು ಬಿಡಿಸಿದ್ದ ಡ್ಯಾನಿಷ್ ಪತ್ರಿಕೆಯ ಉದ್ಯೋಗಿಗಳು ಮತ್ತು ಕಚೇರಿ ಮೇಲೆ ದಾಳಿ ನಡೆಸಲು ಕೂಡ ಆತ ಯೋಜನೆ ರೂಪಿಸಿದ್ದ ಎಂದು ಆರೋಪಿಸಲಾಗಿದೆ.
ಈತ ಮೊದಲು ಎಫ್‌ಬಿಐ ಏಜೆಂಟನಾಗಿಯೂ ಕೆಲಸ ಮಾಡುತ್ತಿದ್ದ ಮತ್ತು ಅದೇ ಹೊತ್ತಿಗೆ ಭಯೋತ್ಪಾದಕರ ಜತೆಗೂ ಸಂಬಂಧ ಹೊಂದಿದ್ದ ಎಂದು ಆರೋಪಗಳು ಬಂದಿವೆಯಾದರೂ ಇದನ್ನು ಅಮೆರಿಕಾ ತಳ್ಳಿ ಹಾಕಿತ್ತು.