ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ಲೀಸ್, ನನಗೆ ಸಹಾಯ ಮಾಡಿ: ಪಾಕಿಸ್ತಾನಕ್ಕೆ ಕಸಬ್ ಮನವಿ (Pakistan | Ajmal Kasab | Mumbai attack | international court)
Bookmark and Share Feedback Print
 
ಮುಂಬೈ ನ್ಯಾಯಾಲಯದಲ್ಲಿ ಸೋಮವಾರ ತನ್ನ ಅಂತಿಮ ಹೇಳಿಕೆ ನೀಡಿದ ಮುಂಬೈ ಭಯೋತ್ಪಾದಕ ದಾಳಿ ಆರೋಪಿ ಅಜ್ಮಲ್ ಅಮೀರ್ ಕಸಬ್, ತನಗೆ ಸಹಾಯ ಮಾಡಬೇಕೆಂದು ತವರು ಪಾಕಿಸ್ತಾನಕ್ಕೆ ಮೊರೆಯಿಟ್ಟಿದ್ದಾನೆ.

ಇಲ್ಲಿ ಪಾಕಿಸ್ತಾನದ ಯಾರಾದರೂ ಮಾಧ್ಯಮ ಪ್ರತಿನಿಧಿಗಳಿದ್ದರೆ ಅವರಲ್ಲಿ ನಾನು ಮಾಡಿಕೊಳ್ಳುತ್ತಿರುವ ಮನವಿಯೇನೆಂದರೆ, ಪ್ರಕರಣದ ಪ್ರತಿವಾದಿ ಸಾಕ್ಷಿಗಳು ಪಾಕಿಸ್ತಾನದಿಂದ ಇಲ್ಲಿಗೆ ಬರಬೇಕು ಮತ್ತು ಇದನ್ನು ಪಾಕಿಸ್ತಾನ ಸರಕಾರಕ್ಕೆ ತಿಳಿಸಿ ಎಂದು ಕಸಬ್ ನ್ಯಾಯಾಲಯದಲ್ಲಿ ತಿಳಿಸಿದ್ದಾನೆ.

ನಿನ್ನ ದೇಶ ಇದುವರೆಗೂ ನಿನಗೆ ಯಾವುದೇ ಸಹಾಯ ಮಾಡಿಲ್ಲವಲ್ಲ ಎಂದು ಇದೇ ಸಂದರ್ಭದಲ್ಲಿ ನ್ಯಾಯಾಧೀಶ ಎಂ.ಎಲ್. ತಹಲ್ಯಾನಿಯವರು ಕಸಬ್‌ಗೆ ನೆನಪಿಸಿದರು.

ನಿನ್ನ ಪ್ರಕರಣದಲ್ಲಿ ವಾದಿಸಲು ನಿನಗೆ ವಕೀಲರನ್ನು ಒದಗಿಸಿರುವುದು ಕೂಡ ನಾವೇ. ಅವರೇ ನಿನ್ನ ಪರ ವಾದಿಸುತ್ತಿದ್ದಾರೆ. ನೀನು ಸಹಾಯ ಬೇಕೆಂದು ಪಾಕಿಸ್ತಾನಕ್ಕೆ ಬರೆದ ಪತ್ರಗಳಿಗೆ ಇದುವರೆಗೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ನ್ಯಾಯಾಧೀಶರು ಹೇಳಿದರು.

ನಿನ್ನ ಪರ ಸಾಕ್ಷಿಗಳಿದ್ದರೆ ಅವರನ್ನು ನೀನೇ ಪಾಕಿಸ್ತಾನದಿಂದ ಕರೆಸಬಹುದು ಎಂದು ನ್ಯಾಯಾಧೀಶರು ತಿಳಿಸಿದರಾದರೂ ಒಪ್ಪದ ಕಸಬ್, ನಾನು ಅವರನ್ನು ಪಾಕಿಸ್ತಾನದ ಸರಕಾರದ ಮೂಲಕ ಮಾತ್ರ ಕರೆಸುತ್ತೇನೆ; ಅದು ಅವರ ಆಂತರಿಕ ವಿಚಾರ. ಪಾಕಿಸ್ತಾನ ಸರಕಾರ ತನ್ನ ಪ್ರತಿನಿಧಿಗಳನ್ನು ಕಳುಹಿಸಿದಲ್ಲಿ, ಅವರೊಂದಿಗೆ ನಾನು ಸಮಾಲೋಚನೆ ನಡೆಸುತ್ತೇನೆ ಎಂದ.

ಅದೇ ಹೊತ್ತಿಗೆ ತನ್ನನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕೆಂದೂ ಕಸಬ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾನೆ. ಆದರೆ ಆತನ ಮನವಿಯನ್ನು ವಿಶೇಷ ನ್ಯಾಯಾಲಯವು ತಳ್ಳಿ ಹಾಕಿದೆ.

ಪ್ರಕರಣದ ತೀರ್ಪು ಬಂದ ನಂತರ ನೀನು ಈ ಮನವಿ ಮಾಡಿಕೊಳ್ಳಬಹುದಾಗಿದೆ. ಆದರೆ ಈಗಲೇ ಅದಕ್ಕೆ ಅವಕಾಶವಿಲ್ಲ ಎಂದು ನ್ಯಾಯಾಧೀಶರು ಕಸಬ್ ಮನವಿಗೆ ಪ್ರತಿಕ್ರಿಯೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ