ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಣರಾಜ್ಯೋತ್ಸವ; ಶಿಸ್ತಿನ ಸಿಪಾಯಿಗಳಿಂದ ದೇಶಕ್ಕೆ ಸೆಲ್ಯೂಟ್ (India | 60th Republic Day | Pratibha Patil | Manmohan Singh)
Bookmark and Share Feedback Print
 
ಇಂದು ದೇಶಕ್ಕೆ 60ನೇ ಗಣರಾಜ್ಯೋತ್ಸವ ಸಂಭ್ರಮ. ರಾಜಧಾನಿ ದೆಹಲಿಯಲ್ಲಿ ರಾಷ್ಟ್ರಪತಿ ಪ್ರತಿಭಾ ಸಿಂಗ್ ಧ್ವಜಾರೋಹಣ ಮಾಡಿದರೆ, ಕರ್ನಾಟಕದಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ರಾಷ್ಟ್ರಧ್ವಜಕ್ಕೆ ಗೌರವ ಅರ್ಪಿಸಿದ್ದಾರೆ.

ರಾಜಧಾನಿಯಲ್ಲಿ ನಡೆದ ಅಭೂತಪೂರ್ವ ಸಮಾರಂಭದಲ್ಲಿ ಭದ್ರತಾ ಪಡೆಗಳು ಆಕರ್ಷಕ ಕವಾಯತು ನಡೆಸಿದರೆ, ಸ್ತಬ್ತಚಿತ್ರಗಳ ಮೂಲಕ ದೇಶದ ಅತ್ಯಾಧುನಿಕ ಮಿಲಿಟರಿ ಶಸ್ತ್ರಾಸ್ತ್ರಗಳ ಪ್ರದರ್ಶನ ನೆರೆದಿದ್ದ ಸಾವಿರಾರು ಮಂದಿಯ ಕಣ್ಮನ ತುಂಬಿತು.

ವಿವಿಧ ಪಡೆಗಳು ನಡೆಸುವ ಸುದೀರ್ಘ ಸಮಯದ ಆಕರ್ಷಕ ಪೆರೇಡ್ ವೀಕ್ಷಿಸಲು ಭಾರೀ ಸಂಖ್ಯೆಯಲ್ಲಿ ಜನತೆ ಬಂದಿದ್ದರು. ವಿದೇಶಿ ರಾಯಭಾರಿಗಳು ಮತ್ತು ಅತಿಥಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದು, ಭಾರತದ ಹೆಮ್ಮೆಯ ಸೇನಾ ಸಾಮರ್ಥ್ಯವನ್ನು ಮೆಚ್ಚಿಕೊಂಡರು.

ರಾಜಧಾನಿಯಲ್ಲಿನ ರಾಜಪಥಕ್ಕೆ ಬೆಳಿಗ್ಗೆ ತೀವ್ರ ಮಂಜಿನ ನಡುವೆಯೂ ಕೋಟ್ ತೊಟ್ಟುಕೊಂಡೇ ರಾಷ್ಟ್ರಪತಿಯವರು ಮುಖ್ಯ ಅತಿಥಿ ದಕ್ಷಿಣ ಕೊರಿಯಾ ಅಧ್ಯಕ್ಷ ಲೀ ಮ್ಯಾಂಗ್ ಬಾಕ್ ಅವರೊಂದಿಗೆ ಆಗಮಿಸಿದರು. 21 ಗನ್ ಸೆಲ್ಯೂಟ್ ಬಳಿಕ ಪಾಟೀಲ್ ರಾಷ್ಟ್ರಧ್ವಜವನ್ನು ಹಾರಿಸುವುದರೊಂದಿಗೆ ಗಣರಾಜ್ಯೋತ್ಸವ ಸಮಾರಂಭಕ್ಕೆ ಚಾಲನೆ ನೀಡಲಾಯಿತು.

ಬೆಳಿಗ್ಗೆ ಸುಮಾರು 10 ಗಂಟೆ ಹೊತ್ತಿಗೆ ರಾಷ್ಟ್ರಪತಿಗಳು ಮೇಜರ್ ಡಿ. ಶ್ರೀರಾಮ್ ಕುಮಾರ್, ಮೇಜರ್ ರೋಹಿತ್ ಶರ್ಮಾ (ಮರಣೋತ್ತರ) ಮತ್ತು ಹವಾಲ್ದಾರ್ ರಾಜೇಶ್ ಕುಮಾರ್ (ಮರಣೋತ್ತರ) ಅವರುಗಳಿಗೆ ಅಶೋಕ ಚಕ್ರ ಗೌರವಗಳನ್ನು ಪ್ರದಾನ ಮಾಡಿದರು.

ರಾಜಪಥದಲ್ಲಿನ ಸಮಾರಂಭಕ್ಕೂ ಮೊದಲು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹಾಗೂ ಸೇನಾಪಡೆ ಮುಖ್ಯಸ್ಥ, ವಾಯುಪಡೆ ಮುಖ್ಯಸ್ಥ ಮತ್ತು ನೌಕಾಪಡೆ ಮುಖ್ಯಸ್ಥರು ಇಂಡಿಯಾ ಗೇಟ್ ಬಳಿ ಅಮರ್ ಜವಾನ್ ಜ್ಯೋತಿಯಲ್ಲಿ ಹುತಾತ್ಮರಿಗೆ ಶ್ರದ್ದಾಂಜಲಿ ಅರ್ಪಿಸಿದರು.

ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ಎ.ಕೆ. ಆಂಟನಿ, ವಿತ್ತ ಸಚಿವ ಪ್ರಣಬ್ ಮುಖರ್ಜಿ, ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಬಹುತೇಕ ಮುಖಂಡರು ಭಾಗವಹಿಸಿದ್ದರು.

ರಾಜಧಾನಿಯಲ್ಲಿ ಬಿಗುಭದ್ರತೆ..
ಭಯೋತ್ಪಾದಕ ದಾಳಿಗಳ ಬೆದರಿಕೆ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವದಂದು ದೇಶದಾದ್ಯಂತ ಭಾರೀ ಭದ್ರತೆ ಏರ್ಪಡಿಸಲಾಗಿದ್ದು, ದೆಹಲಿಯಲ್ಲೂ ಕಠಿಣ ಎಚ್ಚರಿಕೆ ವಹಿಸಲಾಗಿತ್ತು.

11 ಗಂಟೆಯವರೆಗೂ ಮಂಜು ಕವಿದಿದ್ದ ಕಾರಣ ಭದ್ರತಾ ತಪಾಸಣೆಯಲ್ಲಿ ಅಲ್ಪ ತೊಡಕುಂಟಾಗಿದ್ದರೂ, ಹಿನ್ನಡೆಯಾಗಿರಲಿಲ್ಲ. ದೆಹಲಿಯಲ್ಲಿನ ಕೆಂಪು ಕೋಟೆಯಿಂದ ವಿಜಯ್ ಚೌಕ್‌ವರೆಗೆ 15,000 ಭದ್ರತಾ ಸಿಬ್ಬಂದಿಗಳನ್ನು ಹಾಗೂ ಭಾರೀ ಪ್ರಮಾಣದ ಅರೆಸೇನಾ ಪಡೆ ಮತ್ತು ಕಮಾಂಡೋಗಳನ್ನು ಕೂಡ ನಿಯೋಜಿಸಲಾಗಿತ್ತು.

ಅಲ್ಲಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಪ್ರತಿಯೊಬ್ಬರ ಚಲನವಲನಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಲಾಗುತ್ತಿತ್ತು. ಅಲ್ಲದೆ ಮುಂಜಾಗ್ರತೆ ಕ್ರಮವಾಗಿ ದೆಹಲಿಯಲ್ಲಿ ಇಂದು ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ವೈಮಾನಿಕ ಹಾರಾಟವನ್ನು ನಿಷೇಧಿಸಲಾಗಿದೆ.

ಕರ್ನಾಟಕದಲ್ಲಿ...
ಬೆಂಗಳೂರಿನ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಇಂದು ಸಂಭ್ರಮದ ಗಣರಾಜ್ಯೋತ್ಸವವನ್ನು ಆಚರಿಸಲಾಗಿದೆ. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ರಾಷ್ಟ್ರಧ್ವಜಾರೋಹಣ ನಡೆಸುವುದರೊಂದಿಗೆ ಸಮಾರಂಭಕ್ಕೆ ಚಾಲನೆ ನೀಡಲಾಗಿತ್ತು.

ಬಳಿಕ ರಾಜ್ಯ ಪೊಲೀಸ್ ಪಡೆಗಳು ಪಥ ಸಂಚಲನ ನಡೆಸಿದವು. ವಿವಿಧ ಸಾಹಸ ಕಾರ್ಯಕ್ರಮಗಳು, ನೃತ್ಯವೈವಿಧ್ಯಗಳನ್ನೂ ಇಂದು ಆಯೋಜಿಸಲಾಗಿತ್ತು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಪುಟ ಸಹೋದ್ಯೋಗಿಗಳು ಮತ್ತು ವಿರೋಧ ಪಕ್ಷದ ನಾಯಕರುಗಳೂ ಸೇರಿದಂತೆ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.

ಸಿಲಿಕಾನ್ ಸಿಟಿ ಎಂದೇ ಖ್ಯಾತವಾಗಿರುವ ಬೆಂಗಳೂರಿನ ಮೇಲೆ ಉಗ್ರರ ಕಣ್ಣು ಬಿದ್ದಿರುವ ಹಿನ್ನೆಲೆಯಲ್ಲಿ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಲೋಹ ಪರಿಶೋಧಕ, ಸಿಸಿ ಕ್ಯಾಮರಾಗಳನ್ನು ಅಲ್ಲಲ್ಲಿ ಅಳವಡಿಸಿದ್ದರೆ, ಪೊಲೀಸ್ ಪಡೆಗಳು ಯಾವುದೇ ಅಪಾಯವನ್ನು ಎದುರಿಸಲು ಸಿದ್ಧವಾಗಿದ್ದವು.
ಸಂಬಂಧಿತ ಮಾಹಿತಿ ಹುಡುಕಿ