ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕ್ರಿಮಿನಲ್ ಆರೋಪಿಗಳಿಗೆ ಪದ್ಮ ಪ್ರಶಸ್ತಿ: ಬಿಜೆಪಿ ಆಕ್ರೋಶ (NRI hotelier | Sant Singh Chatwal | BJP | Padma awards)
Bookmark and Share Feedback Print
 
ಕ್ರಿಮಿನಲ್ ಪ್ರಕರಣ ಎದುರಿಸಿದ್ದ ಮತ್ತು ಬಂಧನಕ್ಕೊಳಗಾಗಿದ್ದವರಿಗೂ ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಗಳನ್ನು ಪ್ರಕಟಿಸುವ ಮೂಲಕ ಕೇಂದ್ರ ಸರಕಾರವು ಸಾರ್ವಜನಿಕರ ಟೀಕೆಗೆ ಪಾತ್ರವಾಗುತ್ತಿರುವ ಬೆನ್ನಿಗೆ, ಬಿಜೆಪಿ ಕೂಡ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಭಾರತೀಯ ಸ್ಟೇಟ್ ಬ್ಯಾಂಕ್‌ಗೆ ಸುಮಾರು 41 ಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಸಿಬಿಐಯಿಂದ ಬಂಧನಕ್ಕೊಳಗಾಗಿದ್ದ ಛತ್ವಾಲ್ ಮತ್ತು ಜಿಂಕೆ ಕೊಂದಿದ್ದಾರೆ ಎಂದು ಕ್ರಿಮಿನಲ್ ಕೇಸಿಗೊಳಗಾಗಿದ್ದ ಬಾಲಿವುಡ್ ನಟ ಸೈಫ್ ಆಲಿ ಖಾನ್ ಅವರಿಗೆ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರಕಾರವು ಪ್ರಕಟಿಸಿತ್ತು.

ಛತ್ವಾಲ್ ಪ್ರಶಸ್ತಿ ರದ್ದು ಮಾಡಿ: ಬಿಜೆಪಿ
ಕಳಂಕ ಹೊತ್ತಿರುವ ಛತ್ವಾಲ್ ಅವರಿಗೆ ಪ್ರಕಟಿಸಿರುವ ಪದ್ಮ ಭೂಷಣ ಗೌರವವನ್ನು ತಕ್ಷಣವೇ ರದ್ದು ಮಾಡುವಂತೆ ಬಿಜೆಪಿ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.

ಅನಿವಾಸಿ ಭಾರತೀಯ ಹಾಗೂ ಅಮೆರಿಕಾದ ಹೊಟೇಲ್ ಉದ್ಯಮಿ ಛತ್ವಾಲ್ ಅವರಿಗೆ ನೀಡಿರುವ ಪ್ರಶಸ್ತಿಯನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿ ರಾಷ್ಟ್ಪಪತಿ ಪ್ರತಿಭಾ ಪಾಟೀಲ್ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೂ ಬಿಜೆಪಿ ಪತ್ರ ಬರೆದಿದೆ.

ಈ ಪ್ರಕರಣದ ಸಂಬಂಧ ಛತ್ವಾಲ್ ಮುಂಬೈಯಲ್ಲಿ ಬಂಧನಕ್ಕೊಳಗಾಗಿದ್ದರು ಮತ್ತು ನಂತರ ಜಾಮೀನು ಪಡೆದುಕೊಂಡಿದ್ದ ಅವರು, ದೇಶವನ್ನು ತೊರೆದಿದ್ದರು ಎಂದು ಬಿಜೆಪಿ ತನ್ನ ಪತ್ರದಲ್ಲಿ ಸರಕಾರದ ಗಮನ ಸೆಳೆದಿದೆ.

ಇವರ ವಿರುದ್ಧದ ನಾಲ್ಕು ಪ್ರಕರಣಗಳಲ್ಲಿ 2008ರಲ್ಲಿ ಒಂದು ಪ್ರಕರಣದಲ್ಲಿ ನಿರ್ದೋಷಿಯೆಂದು ತೀರ್ಪು ನೀಡಲಾಗಿತ್ತು. ಪ್ರಾಸಿಕ್ಯೂಷನ್ ಮೇಲ್ಮನವಿ ಸಲ್ಲಿಸದೇ ಇದ್ದ ಕಾರಣ ಈ ಪ್ರಕರಣ ಬಿದ್ದು ಹೋಗಿತ್ತು.

ಐ ಡೋಂಟ್ ಕೇರ್: ಛತ್ವಾಲ
ಬಿಜೆಪಿ ಯಾವ ಕಾರಣಕ್ಕೆ ಪ್ರಶಸ್ತಿಯ ಕುರಿತು ಆಕ್ಷೇಪ ಮಾಡುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ನಾನು ದೇಶವನ್ನು ಪ್ರೀತಿಸುತ್ತಿದ್ದೇನೆ, ಕಳೆದ 30 ವರ್ಷಗಳಿಂದ ನಾನು ರಾಷ್ಟ್ರಕ್ಕಾಗಿ ಶ್ರಮಿಸಿದ್ದೇನೆ. ಈ ಪಕ್ಷಗಳ ಬೆದರಿಕೆಗಳನ್ನೆಲ್ಲ ನಾನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಛತ್ವಾಲ್ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ.

ಕಳಂಕಿತರಿಗಲ್ಲ ಪ್ರಶಸ್ತಿ: ಕಾಂಗ್ರೆಸ್
ನಾವು ಯಾವುದೇ ಒಂದು ವಿಚಾರದ ಬಗ್ಗೆ ನಿರ್ದಿಷ್ಟವಾಗಿ ಹೇಳುತ್ತಿಲ್ಲ. ಪ್ರಶಸ್ತಿಗಳನ್ನು ಗೌರವ ಹೊಂದಿರುವವರಿಗೆ ನೀಡಬೇಕೇ ಹೊರತು ಕಳಂಕಿತರಿಗಲ್ಲ ಎಂದು ಕಾಂಗ್ರೆಸ್ ವಕ್ತಾರ ಶಕೀಲ್ ಅಹ್ಮದ್ ಹೇಳಿಕೆ ನೀಡಿದ್ದಾರೆ.

ವಂಚನೆ ಪ್ರಕರಣವನ್ನು ಎದುರಿಸಿದ್ದ ಛತ್ವಾಲ್ ಅವರಿಗೆ ಪದ್ಮ ಪ್ರಶಸ್ತಿ ಪ್ರಕಟಿಸಿರುವುದು ಸರಿಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

ಪ್ರಾಮಾಣಿಕತೆಯ ಬಗ್ಗೆ ಯಾವುದೇ ಸಂಶಯ ಇಲ್ಲ ವ್ಯಕ್ತಿಗಳಿಗೆ ಮಾತ್ರ ಪ್ರಶಸ್ತಿಗಳನ್ನು ನೀಡಬೇಕು, ಯಾವುದೇ ಕಳಂಕ ಹೊತ್ತಿದ್ದವರಿಗಲ್ಲ ಎಂದಷ್ಟೇ ಪ್ರತಿಕ್ರಿಯಿಸಿದ್ದು, ಛತ್ವಾಲ್ ಕುರಿತು ನಿರ್ದಿಷ್ಟವಾಗಿ ಹೇಳಿಕೆ ನೀಡಲು ನಿರಾಕರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ