ಮಹಾರಾಷ್ಟ್ರ ಸರಕಾರವು ಮುಂಬೈಯಲ್ಲಿ ಟ್ಯಾಕ್ಸಿ ಪರವಾನಗಿ ಸಿಗಬೇಕಾದರೆ ಮರಾಠಿ ಕಡ್ಡಾಯ ಎಂಬ ನೀತಿ ರೂಪಿಸಿದ್ದು ತೀವ್ರ ವಿಷಾದಕರ ಎಂದಿರುವ ರಿಲಯೆನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ, ಮುಂಬೈ ಮಹಾನಗರಿ ಎಲ್ಲಾ ಭಾರತೀಯರಿಗೆ ಸೇರಿದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾವೆಲ್ಲರೂ ಮೊದಲು ಭಾರತೀಯರು. ಮುಂಬೈ, ಚೆನ್ನೈ ಮತ್ತು ದೆಹಲಿಗಳು ಎಲ್ಲಾ ಭಾರತೀಯರಿಗೆ ಸೇರಿದ ನಗರಗಳು. ಇದು ವಾಸ್ತವ ಎಂದು ಲಂಡನ್‌ನ ವಾಣಿಜ್ಯ ಶಾಲೆಯೊಂದರಲ್ಲಿ ರಾಜ್ಯಸಭಾ ಸದಸ್ಯ ಎನ್.ಕೆ. ಸಿಂಗ್ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಾ ಅಂಬಾನಿ ತಿಳಿಸಿದ್ದಾರೆ.
ಮುಂಬೈ ಎಲ್ಲರಿಗೂ ಸೇರಿದ್ದು ಎಂದು ಕೆಲವು ತಿಂಗಳುಗಳ ಹಿಂದೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ನೀಡಿದ್ದ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದ ಶಿವಸೇನೆ, ಅವರ ಮರಾಠಿ ನಿಷ್ಠೆಯನ್ನು ಪ್ರಶ್ನಿಸಿತ್ತು. ಇದೀಗ ಅಂಬಾನಿ ಹೇಳಿಕೆಗೂ ಅದೇ ರೀತಿಯ ಪ್ರತಿಕ್ರಿಯೆ ನೀಡಬಹುದೆಂದು ನಿರೀಕ್ಷಿಸಲಾಗಿದೆ.
ಆರ್ಥಿಕ ಉದಾರೀಕರಣದ ಬಳಿಕ 'ಲೈಸೆನ್ಸ್ ರಾಜ್'ನಿಂದ ಭಾರತದ ಕಾರ್ಪೊರೇಟ್ ಜಗತ್ತು ದೂರ ಸರಿದಿರುವುದು ಅಂಬಾನಿಯವರ ಹೇಳಿಕೆಯಲ್ಲಿ ಸ್ಪಷ್ಟವಾಗಿದ್ದು, ಮುಂಬೈಯ ಬಡ ಟ್ಯಾಕ್ಸಿವಾಲಾಗಳು ಈಗಲೂ ಲೈಸೆನ್ಸ್ ರಾಜ್‌ನಲ್ಲೇ ತೊಳಲಾಡುತ್ತಿದ್ದಾರೆ ಎಂದು ಅಂಬಾನಿ ಹೇಳಿದಾಗ ನೆರೆದಿದ್ದವರು ಭಾರೀ ಚಪ್ಪಾಳೆಯೊಂದಿಗೆ ಅದನ್ನು ಸ್ವೀಕರಿಸಿದರು.
ಟ್ಯಾಕ್ಸಿ ಚಾಲಕರ ನೂತನ ವಿವಾದದ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪ್ರತೀ ವರ್ಷ ಒಂದೂವರೆ ಕೋಟಿಯಿಂದ ಎರಡು ಕೋಟಿಯಷ್ಟು ಉದ್ಯೋಗ ಸೃಷ್ಟಿಸಲು ಭಾರತಕ್ಕೆ ಸಾಧ್ಯವೇ ಎಂಬುದು ನಿಜವಾದ ಸವಾಲು ಮತ್ತು ಅವಕಾಶ ಎಂದರು.
ಮರಾಠಿ ಓದಲು ಮತ್ತು ಬರೆಯಲು ಗೊತ್ತಿರುವ ಹಾಗೂ ಮಹಾರಾಷ್ಟ್ರದಲ್ಲಿ ಕನಿಷ್ಠ 15 ವರ್ಷ ನೆಲೆಸಿರುವವರಿಗೆ ಮಾತ್ರ ಮುಂಬೈಯಲ್ಲಿ ಟ್ಯಾಕ್ಸಿ ಪರವಾನಗಿ ನೀಡಲಾಗುತ್ತದೆ ಎಂದು ಮಹಾರಾಷ್ಟ್ರ ಸರಕಾರ ನೀತಿ ರೂಪಿಸಿತ್ತು. ಆದರೆ ಇದಕ್ಕೆ ತೀವ್ರ ವಿರೋಧ ಕಂಡು ಬಂದ ನಂತರ ಒಂದೇ ದಿನದಲ್ಲಿ ನಿರ್ಧಾರ ಸಡಿಲಿಸಿದ್ದ ಸರಕಾರ, ಹಿಂದಿ ಮತ್ತು ಗುಜರಾತಿ ಭಾಷಿಗರಿಗೂ ಪರ್ಮಿಟ್ ನೀಡಲಾಗುತ್ತದೆ ಎಂದಿತ್ತು.