'ಅತ್ಯಾಚಾರಗಳ ರಾಜಧಾನಿ'ಯಾಗುವುದನ್ನು ತಪ್ಪಿಸಲು ಗೋವಾ ತನ್ನ ಯತ್ನ ಮುಂದುವರಿಸುತ್ತಿದ್ದಂತೆ ಅತ್ಯಾಚಾರ ಪ್ರಕರಣಗಳು ಎಗ್ಗಿಲ್ಲದೆ ಮುಂದುವರಿಯುತ್ತಿದ್ದು, ಒಂಬತ್ತರ ಹರೆಯದ ರಷ್ಯನ್ ಬಾಲಕಿಯೊಬ್ಬಳನ್ನು ಕ್ರೂರವಾಗಿ ನಡೆಸಿಕೊಂಡ ಬಗ್ಗೆ ವರದಿಯಾಗಿದೆ.
ಪಣಜಿಯಿಂದ 45 ಕಿಲೋ ಮೀಟರ್ ದೂರದಲ್ಲಿರುವ ಅರಂಬಾಲ್ ಬೀಚ್‌ನಲ್ಲಿ ಹುಡುಗಿ ಸ್ನಾನ ಮಾಡುತ್ತಿದ್ದಾಗ ಘಟನೆ ಸಂಭವಿಸಿದೆ ಎಂದು ಪೆರ್ನೆಮ್ ಪೊಲೀಸ್ ಠಾಣೆಯಲ್ಲಿ ಬಾಲೆಯ ತಾಯಿ ದೂರು ನೀಡಿದ್ದಾರೆ.
ಕೃತ್ಯದ ಹಿಂದೆ ಇಬ್ಬರಿದ್ದಾರೆ ಎಂದು ಹೇಳಲಾಗಿದೆ. ಅವರಲ್ಲಿ ಒಬ್ಬ ಬಾಲಕಿಯ ತಾಯಿಯ ಜತೆ ಲೋಕಾಭಿರಾಮ ಮಾತನಾಡುತ್ತಿದ್ದಾಗ, ಮತ್ತೊಬ್ಬ ಯುವಕ ಹುಡುಗಿ ಸಮುದ್ರದಲ್ಲಿ ಇಳಿದು ಸ್ನಾನ ಮಾಡುತ್ತಿದ್ದಾಗ ಕಿಚಾಯಿಸಲು ಆರಂಭಿಸಿದ್ದ. ಈ ಸಂದರ್ಭದಲ್ಲಿ ಅಳುವುದಕ್ಕೆ ಶುರು ಮಾಡಿದ ಹುಡುಗಿ, ಬೀಚ್‌ನಲ್ಲಿ ಹಾಕಿದ್ದ ಬೆಡ್‌ನಲ್ಲಿ ಮಲಗಿದ್ದ ತಾಯಿಯೆಡೆಗೆ ಓಡಿ ಬಂದಿದ್ದಳು.
ಅಲ್ಲಿ ಅಮಾನ್ ಎಂಬ ಪ್ರವಾಸಿ ಯುವಕನೊಬ್ಬ ತನ್ನ ಬೆರಳನ್ನು ಬಾಲಕಿಯ ಗುಪ್ತಾಂಗದೊಳಗೆ ಹಾಕಿದ್ದನ್ನು ಇದೇ ಸಂದರ್ಭದಲ್ಲಿ ಆಕೆ ತಾಯಿಗೆ ತಿಳಿಸಿದ್ದಳೆಂದು ಪೊಲೀಸ್ ಇನ್ಸ್‌ಪೆಕ್ಟರ್ ಉತ್ತಮ್ ರಾವುತ್ ದೇಸಾಯಿ ತಿಳಿಸಿದ್ದಾರೆ.
ತಾಯಿಗೆ ಬಾಲಕಿ ದೂರು ನೀಡುತ್ತಿದ್ದಂತೆ ಸ್ಥಳದಿಂದ ಆರೋಪಿಗಳು ಪರಾರಿಯಾಗಿದ್ದಾರೆ. ಬಳಿಕ ಬಾಲಕಿಯನ್ನು ಪಣಜಿಯ ಸರಕಾರಿ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆಂದು ಕಳುಹಿಸಲಾಗಿದ್ದು, ಪ್ರವಾಸಿಗ ಕುಕೃತ್ಯ ನಡೆಸಿರುವುದನ್ನು ವರದಿ ಖಚಿತಪಡಿಸಿದೆ.
ಬಾಲಕಿಯ ವೈದ್ಯಕೀಯ ಪರೀಕ್ಷೆಯ ವರದಿ ಬಂದ ನಂತರ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ 376ರ ಮತ್ತು ಗೋವಾ ಮಕ್ಕಳ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಅತ್ಯಾಚಾರ ಪ್ರಕರಣವನ್ನು ನಾವು ದಾಖಲಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ತಾಯಿ ನೀಡಿರುವ ಮಾಹಿತಿಯನ್ನಾಧರಿಸಿ ನಾವು ಆರೋಪಿಯನ್ನು ಹುಡುಕುತ್ತಿದ್ದೇವೆ. ಈಗ ನಮಗೆ ಗೊತ್ತಿರುವುದು ಆತನ ಹೆಸರು ಅಮಾನ್ ಎಂಬುದು ಮಾತ್ರ. ಇಲ್ಲೇ ಮೂರು ಕಿಲೋ ಮೀಟರ್ ವ್ಯಾಪ್ತಿಯೊಳಗಿನ ಯಾವುದಾದರೂ ಲಾಡ್ಜ್‌ನಲ್ಲಿ ಆತ ಉಳಿದುಕೊಂಡಿರುವ ಸಾಧ್ಯತೆಯಿದೆ ಎಂದು ದೇಸಾಯಿ ವಿವರಣೆ ನೀಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಗೋವಾ ಬೀಚುಗಳಲ್ಲಿ ವಿದೇಶೀಯರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು, ಮಾಧ್ಯಮಗಳು ಇದನ್ನು ಎತ್ತಿ ತೋರಿಸುತ್ತಿವೆ. ಆದರೆ ಅಲ್ಲಿನ ಸರಕಾರ ಮಾಧ್ಯಮಗಳ ಮೇಲೆಯೇ ಹರಿ ಹಾಯುತ್ತಿದೆ.
ರಷ್ಯಾ ಸರಕಾರ ಖಂಡನೆ... ಗೋವಾದಲ್ಲಿ ನಡೆದಿರುವ ಅಪ್ರಾಪ್ತೆಯ ಅತ್ಯಾಚಾರ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ರಷ್ಯಾ ಸರಕಾರ, ಇದು ವಿಷಾದನೀಯ ಎಂದಿದೆ. ಅಲ್ಲದೆ ತಮ್ಮ ದೇಶದವರೇ ಪ್ರತೀ ಬಾರಿಯೂ ದೌರ್ಜನ್ಯಕ್ಕೊಳಗಾಗುತ್ತಿರುವುದರಿಂದ ಇದನ್ನು ತಾನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದೆ.
ಇದು ಹೃದಯವಿದ್ರಾವಕ ಘಟನೆ. ಅದರಲ್ಲೂ ಗೋವಾದಲ್ಲಿ ರಷ್ಯನ್ ಪ್ರಜೆಗಳ ಮೇಲೆಯೇ ಅತ್ಯಾಚಾರ, ದೌರ್ಜನ್ಯಗಳು ನಡೆಯುತ್ತಿವೆ. ಇದನ್ನು ಅಲ್ಲಿನ ಸರಕಾರ ಗಂಭೀರವಾಗಿ ಪರಿಗಣಿಸಿ, ಅಪರಾಧಗಳನ್ನು ತಡೆಯದಿದ್ದರೆ ನಾವು ನಮ್ಮ ಪ್ರವಾಸಿಗರಿಗೆ ಕಠಿಣ ಸಲಹೆ-ಸೂಚನೆಗಳನ್ನು ನೀಡಬೇಕಾಗುತ್ತದೆ ಎಂದು ರಷ್ಯಾ ದೂತವಾಸ ಕಚೇರಿಯ ಹಿರಿಯ ರಾಯಭಾರಿ ಸೆರ್ಜಿ ವಿ ಕಾರ್ಮಾರ್ಲಿಟೋ ತಿಳಿಸಿದ್ದಾರೆ.