ಲಷ್ಕರ್ ಇ ತೋಯ್ಬಾದೊಂದಿಗೆ ಸಂಬಂಧ ಹೊಂದಿದ್ದ ಆರೋಪದ ಮೇಲೆ ಬಂಧಿತನಾಗಿರುವ ಡೇವಿಡ್ ಹೆಡ್ಲಿ, ಮುಂಬೈ ಭಯಾನಕ ದಾಳಿಗಿಂತಲೂ ಮೊದಲು ಭಾರತದಲ್ಲಿದ್ದಾಗ ಎಫ್‌ಬಿಐ ಪರ ಕೆಲಸ ಮಾಡಿದ್ದ ಎಂದು ನನಗೀಗ ಮನದಟ್ಟಾಗಿದೆ ಎಂದು ಖ್ಯಾತ ಸಿನಿಮಾ ನಿರ್ದೇಶಕ ಮಹೇಶ್ ಭಟ್ ಪುತ್ರ ರಾಹುಲ್ ಭಟ್ ಹೇಳಿದ್ದಾರೆ.
ಹೆಡ್ಲಿ ಅಮೆರಿಕಾ ಪರ ಕೆಲಸ ಮಾಡುತ್ತಿದ್ದ ಎಂಬುದು ನನಗೀಗ ಮನದಟ್ಟಾಗುತ್ತಿದೆ. ಅವನನ್ನು ನಾನು 'ಏಜೆಂಟ್ ಹೆಡ್ಲಿ'ಯೆಂದೇ ಅಡ್ಡ ಹೆಸರಿನಿಂದ ಕರೆಯುತ್ತಿದ್ದೆ ಎಂದು ಬ್ರಿಟನ್‌ನ 'ಚಾನೆಲ್ 4' ಟೀವಿಗೆ ನೀಡಿರುವ ಸಂದರ್ಶನದಲ್ಲಿ ರಾಹುಲ್ ತಿಳಿಸಿದ್ದಾರೆ.
ಅಲ್‌ಖೈದಾದೊಳಗೆ ಸೇರಿಕೊಳ್ಳಬೇಕೆಂಬುದು ಅಮೆರಿಕನ್ನರ ಗಾಢ ಬಯಕೆಯಾಗಿತ್ತು. ಹೆಡ್ಲಿ ಇದನ್ನು ಸಾಧ್ಯವಾಗಿಸಿದ್ದ. ಈ ರೀತಿಯ ಅಮೆರಿಕನ್ ಏಜೆಂಟ್ ಅವನಾಗಿದ್ದ ಎಂದು ನಾನು ನಂತರ ಮತ್ತು ಈಗ ಅಂದುಕೊಳ್ಳುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ನನ್ನನ್ನು ಸಾರ್ವಜನಿಕವಾಗಿ 'ಏಜೆಂಟ್ ಹೆಡ್ಲಿ'ಯೆಂದು ಕರೆಯದಂತೆ ನನ್ನಲ್ಲಿ ಬೇಡಿಕೊಂಡಿದ್ದ. ಇದರ ಹಿಂದಿನ ಮರ್ಮ ನನಗೆ ಅಂದು ಅರಿವಿಗೆ ಬಂದಿರಲಿಲ್ಲ. ಆದರೆ ಈಗ ತಿಳಿಯುತ್ತಿದೆ ಎಂದು ರಾಹುಲ್ ತಿಳಿಸಿದ್ದಾರೆಂದು ಚಾನೆಲ್ 4 ಹೇಳಿದೆ.
ಅವನೊಬ್ಬ ಅತ್ಯುತ್ತಮ ವ್ಯಕ್ತಿ. ಪ್ರಭಾವಶಾಲಿಯಾಗಿದ್ದ ಆತ ಹಾಸ್ಯಪ್ರವೃತ್ತಿಯ ಜತೆ ಮತ್ತೊಬ್ಬರ ಬಗ್ಗೆ ಕಾಳಜಿ, ಭಾವನೆಗಳನ್ನು ಗೌರವಿಸುವುದು ಮುಂತಾದ ವಿಶೇಷ ಗುಣಗಳನ್ನು ಹೊಂದಿದ್ದ ಎಂದು ಹೇಳಿದ್ದಾರೆ.
ಮುಂಬೈ ದಾಳಿಗಿಂತ ಮೊದಲು ಭಾರತದಲ್ಲಿದ್ದ ಹೆಡ್ಲಿಯ ಜತೆ ರಾಹುಲ್ ಸ್ನೇಹ ಹೊಂದಿದ್ದು, ಹೆಡ್ಲಿ ಲಷ್ಕರ್ ಇ ತೋಯ್ಬಾ ಜತೆ ಸಂಬಂಧ ಹೊಂದಿದ್ದ ಎಂದು ಹೇಳಲಾಗಿದೆ. ಇದೇ ಕಾರಣಕ್ಕಾಗಿ ರಾಹುಲ್ ಭಟ್ ಅವರನ್ನು ಕೆಲ ಸಮಯದ ಹಿಂದೆ ಮುಂಬೈ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.
ರಾಹುಲ್ ಮತ್ತು ಅವರ ಸಹಚರ ವಿಲಾಸ್ ವರಾಕ್ ಅವರು ಮುಂಬೈಯಲ್ಲಿನ 'ಮೋಕ್ಷ್' ಜಿಮ್‌ನಲ್ಲಿ ತರಬೇತುದಾರರಾಗಿದ್ದ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ನೀಡುತ್ತಿದ್ದ ಹೆಡ್ಲಿಯ ಪರಿಚಯವಾಗಿತ್ತು.
ಮುಂಬೈ ದಾಳಿ ನಡೆದ ಎರಡು ವಾರಗಳ ನಂತರ (ಡಿಸೆಂಬರ್ 11, 2008) ರಾಹುಲ್‌ಗೆ ಇಮೇಲ್ ಮಾಡಿದ್ದ ಹೆಡ್ಲಿ, ಮುಂಬೈಯಲ್ಲಿ ನಡೆದಿರುವ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದ. ನಾವು ಇದನ್ನು ಮೀರಿ ನಿಲ್ಲಬೇಕು ಎಂದು ಭರವಸೆಯನ್ನೂ ತುಂಬಿಸಲು ಯತ್ನಿಸಿದ್ದ ಎಂದೂ ರಾಹುಲ್ ಸಂದರ್ಶನದ ಸಂದರ್ಭದಲ್ಲಿ ವಿವರಣೆ ನೀಡಿದ್ದಾರೆ.
ಪಾಕಿಸ್ತಾನಕ್ಕೆ ಪ್ರಯಾಣಿಸಬೇಕೆಂಬ ಉದ್ದೇಶದಿಂದ ಫಿಲಾಡೆಲ್ಫಿಯಾಕ್ಕೆ ತೆರಳಲು ಓಹಾರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಡ್ಲಿ ಸಿದ್ಧತೆ ನಡೆಸುತ್ತಿದ್ದಾಗ ಅಮೆರಿಕಾ ಎಫ್‌ಬಿಐಯ ಉಗ್ರ ನಿಗ್ರಹ ಜಂಟಿ ಪಡೆಯಿಂದ 2009ರ ಅಕ್ಟೋಬರ್‌ನಲ್ಲಿ ಬಂಧನಕ್ಕೊಳಗಾಗಿದ್ದ.
ಹೆಡ್ಲಿ ಭಾರತದಲ್ಲಿನ ಕೆಲವು ಪ್ರದೇಶಗಳ ವೀಡಿಯೋ ಚಿತ್ರೀಕರಣ ನಡೆಸಿ ಲಷ್ಕರ್ ಇ ತೋಯ್ಬಾಕ್ಕೆ ಕೊಟ್ಟು ಮುಂಬೈ ದಾಳಿಗೆ ಸಹಕರಿಸಿದ್ದ ಮತ್ತು ಪ್ರವಾದಿ ಮೊಹಮ್ಮದ್ ಅವರ ಕಾರ್ಟೂನ್ ಬಿಡಿಸಿದ್ದವನ ಮೇಲೆ ಮತ್ತು ಡ್ಯಾನಿಷ್ ಪತ್ರಿಕೆಯ ಮೇಲೆ ದಾಳಿ ನಡೆಸಲು ಯೋಜಿಸಿದ್ದ ಎಂದು ಆರೋಪಿಸಲಾಗಿದೆ.