ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಚಿವ ರಾಣೆಯನ್ನೇ ನನ್ನ ಸಾಕ್ಷಿಯೆಂದು ಪರಿಗಣಿಸಿ: ಕಸಬ್ (Narayan Rane | Pakistani gunman | Ajmal Kasab | Mumbai terror attack)
Bookmark and Share Feedback Print
 
ಮುಂಬೈ ದಾಳಿಯಲ್ಲಿ ಸ್ಥಳೀಯರ ಕೈವಾಡವೂ ಇದೆ ಎಂದು ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಸಚಿವ ನಾರಾಯಣ ರಾಣೆಯವರನ್ನು ತನ್ನ ಪರ ಸಾಕ್ಷಿ ಹೇಳಲು ನ್ಯಾಯಾಲಯಕ್ಕೆ ಕರೆಸಬೇಕೆಂದು ಮುಂಬೈ ದಾಳಿ ಆರೋಪಿ ಅಜ್ಮಲ್ ಕಸಬ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಸಾಕ್ಷಿಗಳ ವಿಚಾರಣೆಯನ್ನು ಬುಧವಾರ ಮುಕ್ತಾಯಗೊಳಿಸಿದ ವಿಶೇಷ ನ್ಯಾಯಾಲಯವು ಕಸಬ್ ಸಲ್ಲಿಸಿದ ವಿಚಿತ್ರ ಮನವಿಯನ್ನು ತಳ್ಳಿ ಹಾಕಿದ್ದು, ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿದೆ.

ಕಂದಾಯ ಸಚಿವ ರಾಣೆಯವರನ್ನು ಸಾಕ್ಷಿಯಾಗಿ ಪರಿಗಣಿಸಿ ವಿಚಾರಣೆ ನಡೆಸಬೇಕೆಂದು ಕಸಬ್ ಮನವಿಯನ್ನು ತನ್ನ ವಕೀಲ ಕೆ.ಪಿ. ಪವಾರ್ ಅವರ ಮೂಲಕ ಸಲ್ಲಿಸಿದ್ದ. ಆದರೆ ಇದು ಉಚಿತವಲ್ಲ ಎಂಬ ಕಾರಣ ನೀಡಿದ ನ್ಯಾಯಮೂರ್ತಿ ಎಂ.ಎಲ್. ತಹಲ್ಯಾನಿ ಬೇಡಿಕೆ ಪೂರೈಸಲು ನಿರಾಕರಿಸಿದರು.

2008ರ ನವೆಂಬರ್ 26ರ ಮುಂಬೈ ಭಯೋತ್ಪಾದನಾ ದಾಳಿಯ ಹಿಂದೆ ಸ್ಥಳೀಯ ಶಕ್ತಿಗಳೂ ಕೆಲಸ ಮಾಡಿವೆ ಎಂದಿದ್ದ ರಾಣೆಯವರು ಸ್ವಲ್ಪದಿನದ ಬಳಿಕ, ಉಗ್ರರಿಗೆ ಹಣಕಾಸು ಮತ್ತು ಇತರ ಸಹಕಾರ ನೀಡಿದ್ದ ಕೆಲವು ರಾಜಕಾರಣಿಗಳ ಬಗ್ಗೆ ನನಗೆ ಗೊತ್ತು ಎಂದಿದ್ದರು. ಹಾಗಾಗಿ ಅವರನ್ನು ವಿಚಾರಣೆ ನಡೆಸಬೇಕು ಎಂದು ಕಸಬ್ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದ.

ಇದೇ ವಿಚಾರದ ಸಂಬಂಧ ರಾಣೆಯವರ ಹೇಳಿಕೆಯ ಕುರಿತು ತನಿಖೆ ನಡೆಸಬೇಕೆಂದು ಸೋಲಾಪುರ ಮೂಲದ ಪುರುಷೋತ್ತಮ ಬಾರ್ಡೆ ಎಂಬವರು ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದನ್ನು ಸಲ್ಲಿಸಿದ್ದರು. ಇದಕ್ಕೆ ಉತ್ತರಿಸಿದ್ದ ರಾಣೆ, ತಾನು ರಾಜಕಾರಣ ಅಪರಾಧೀಕರಣಗೊಳ್ಳುತ್ತಿರುವುದರ ಬಗ್ಗೆಯಷ್ಟೇ ಹೇಳಿದ್ದೆ ಹೊರತು ಯಾರದೇ ಕುರಿತಾದ ವೈಯಕ್ತಿಕ ಹೇಳಿಕೆ ನೀಡಿರಲಿಲ್ಲ ಎಂದಿದ್ದರು.

ಕೃತ್ಯದಲ್ಲಿ ಕಸಬ್ ಪಾಲ್ಗೊಂಡಿದ್ದಾನೆ ಎಂಬ ಆರೋಪವಿರುವುದರಿಂದ ರಾಣೆಯವರನ್ನು ಸಾಕ್ಷಿ ಎಂದು ಪರಿಗಣಿಸಿ ವಿಚಾರಣೆ ನಡೆಸಿದಲ್ಲಿ ದಾಳಿಯನ್ನು ಯೋಜಿಸಿದವರು ಮತ್ತು ಪಾಲ್ಗೊಂಡ ವ್ಯಕ್ತಿಗಳ ಕುರಿತು ತಿಳಿದುಕೊಳ್ಳಬಹುದು ಎಂದು ಪವಾರ್ ವಾದಿಸಿದ್ದರು.

ರಾಣೆಯವರನ್ನು ಸಾಕ್ಷಿಯಾಗಿ ಪರಿಗಣಿಸಿ ವಿಚಾರಣೆ ನಡೆಸಬೇಕೆಂಬ ಕಸಬ್ ಮನವಿಗೆ ಸರಕಾರಿ ವಕೀಲ ಉಜ್ವಲ್ ನಿಕ್ಕಂ ತೀವ್ರ ವಿರೋಧ ವ್ಯಕ್ತಪಡಿಸಿದರು. ಇದನ್ನು ಬೆಂಬಲಿಸಿದ ನ್ಯಾಯಾಧೀಶರು, ಇದರಿಂದ ಸಮಯ ವ್ಯರ್ಥವಲ್ಲದೆ ಕಸಬ್‌ಗೆ ಯಾವ ರೀತಿಯಿಂದಲೂ ಸಹಾಯವಾಗದು ಎಂದು ಅಭಿಪ್ರಾಯಟ್ಟರು.
ಸಂಬಂಧಿತ ಮಾಹಿತಿ ಹುಡುಕಿ