ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಷ್ಟ್ರ ಮಟ್ಟದಲ್ಲಿ ಕಡ್ಡಾಯ ಮತದಾನ ಅಸಾಧ್ಯ: ಚಾವ್ಲಾ (Compulsory voting | national polls | Chief Election Commissioner | Navin Chawla)
Bookmark and Share Feedback Print
 
ರಾಷ್ಟ್ರ ಮಟ್ಟದಲ್ಲಿ ಪ್ರತಿಯೊಬ್ಬರಿಗೂ ಮತದಾನ ಕಡ್ಡಾಯಗೊಳಿಸುವುದು ಕಷ್ಟ ಎಂದಿರುವ ಮುಖ್ಯ ಚುನಾವಣಾ ಆಯುಕ್ತ ನವೀನ್ ಚಾವ್ಲಾ, ಈ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿದ್ದರೂ ಲೋಕಸಭೆಗೆ ಬಿಟ್ಟದ್ದು ಎಂದಿದ್ದಾರೆ.

ರಾಷ್ಟ್ರೀಯ ಚುನಾವಣೆಯಲ್ಲಿ ಮತದಾನ ಕಡ್ಡಾಯಗೊಳಿಸಬಹುದೇ ಎಂದು ನೀವು ನನ್ನಲ್ಲಿ ಕೇಳುವುದಾದರೆ, ಅದು ಸಾಧ್ಯವಾಗುವ ಕಾರ್ಯವೆಂದು ನನಗೆ ಅನಿಸುತ್ತಿಲ್ಲ. ಆದರೆ ಇದರ ಕುರಿತು ಸಂಸತ್‌ ಚರ್ಚೆ ನಡೆಸಿ, ಸೂಕ್ತ ಕಾನೂನನ್ನು ಜಾರಿಗೊಳಿಸಲು ಅವಕಾಶವಿದೆ ಎಂದರು.

ಇದನ್ನು ಸಂಸತ್ತು ಚರ್ಚೆ ನಡೆಸಬೇಕು, ಪರಿಶೀಲನೆ ನಡೆಸಬೇಕು ಮತ್ತು ನಂತರ ಅಗತ್ಯ ಬಿದ್ದರೆ ಅದಕ್ಕೆ ಬೇಕಾಗಿರುವ ಮಸೂದೆಗಳನ್ನು ಮಾಡಬೇಕು ಎಂದಷ್ಟೇ ನಾನು ಹೇಳಬಲ್ಲೆ. ಮುಂದೇನಾಗುತ್ತದೆಯೋ ಕಾದು ನೋಡೋಣ ಎಂದು ಚಾವ್ಲಾ ತಿಳಿಸಿದ್ದಾರೆ.

ಮತದಾನ ಪ್ರಕ್ರಿಯೆಯಲ್ಲಾಗಬೇಕಾದ ಪ್ರಗತಿಯ ಕುರಿತಾಗಿನ ಈ ಕಾರ್ಯಕ್ರಮದಲ್ಲಿ ಮತ್ತೊಬ್ಬ ಆಯುಕ್ತ ಎಸ್.ವೈ. ಖುರೇಷಿ, ಕಡ್ಡಾಯ ಮತದಾನ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾಪ್ರಭುತ್ವ ಮತ್ತು ಕಡ್ಡಾಯ ಎರಡೂ ಒಟ್ಟಿಗೆ ಕೈ-ಕೈ ಹಿಡಿದುಕೊಂಡು ಹೋಗಲು ಸಾಧ್ಯವಿಲ್ಲ. ನಮ್ಮ ಪ್ರಕಾರ ಮತದಾರರ ವಿದ್ಯಾಭ್ಯಾಸ ಮುಖ್ಯವೇ ಹೊರತು ಕಡ್ಡಾಯವಲ್ಲ. ಈ ಕುರಿತು ನಮ್ಮ ನಿಲುವು ಸ್ಪಷ್ಟವಾಗಿದೆ ಎಂದರು.

ವಿಶ್ವದಾದ್ಯಂತದ 25ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಕೇವಲ ಥಾಯ್ಲೆಂಡ್ ಪ್ರತಿನಿಧಿ ಮಾತ್ರ ತಮ್ಮ ದೇಶದಲ್ಲಿ ಕಡ್ಡಾಯ ಮತದಾನ ಪದ್ಧತಿಯಿರುವುದನ್ನು ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಖುರೇಷಿ, ಅಲ್ಲಿನ ವ್ಯವಸ್ಥೆ ಹೇಗಿದೆಯೆಂಬುದರ ಕುರಿತು ನಾನು ತಿಳಿದುಕೊಳ್ಳಲು ಬಯಸುತ್ತಿದ್ದೇನೆ. ಅದರ ಒಳಿತು ಕೆಡುಕುಗಳನ್ನು ಪರಿಶೀಲನೆ ನಡೆಸಬೇಕಾಗಿದೆ ಎಂದರು.

ಮಹಾನಗರ ಪಾಲಿಕೆ, ಪುರಸಭೆ ಮತ್ತಿತರ ಸ್ಥಳೀಯಾಡಳಿತಗಳಲ್ಲಿ ಕಡ್ಡಾಯ ಮತದಾನವನ್ನು ಇತ್ತೀಚೆಗಷ್ಟೇ ಗುಜರಾತ್ ಸರಕಾರ ಜಾರಿಗೆ ತಂದಿತ್ತು. ಇದರ ಬಗ್ಗೆ ಪರ-ವಿರೋಧ ಚರ್ಚೆಗಳೀಗ ದೇಶದಾದ್ಯಂತ ನಡೆಯುತ್ತಿವೆ.
ಸಂಬಂಧಿತ ಮಾಹಿತಿ ಹುಡುಕಿ