ತೆಲಂಗಾಣ ಪ್ರತ್ಯೇಕ ರಾಜ್ಯ ಬೇಡಿಕೆ ಕುರಿತು ಪರಿಶೀಲನೆ ನಡೆಸುವ ಸಲುವಾಗಿ ಮುಂದಿನ ವಾರ ಸಮಿತಿಯೊಂದನ್ನು ರಚಿಸಲಾಗುತ್ತದೆ ಎಂದು ಹಲವು ದಿನಗಳಿಂದ ಕಾಯುತ್ತಿರುವ ಸಮಿತಿಯ ಕುರಿತು ಕೇಂದ್ರ ಗೃಹಸಚಿವ ಪಿ. ಚಿದಂಬರಂ ಗುರುವಾರ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ನಾವು ಅಂತಿಮ ಹಂತಕ್ಕೆ ತಲುಪಿದ್ದೇವೆ. ಎಲ್ಲವೂ ಸರಿಯಾಗಿ ನಡೆದರೆ ಈ ವಾರಾಂತ್ಯದಲ್ಲಿ ನಾವು ಸಮಿತಿಯನ್ನು ಹೊಂದಲಿದ್ದು, ಮುಂದಿನ ವಾರ ಸಮಿತಿಯನ್ನು ಪ್ರಕಟಿಸುತ್ತೇವೆ ಎಂದು ಯಾರ ಹೆಸರನ್ನೂ ಬಹಿರಂಗಪಡಿಸಲಿಚ್ಛಿಸದ ಸಚಿವರು ಹೇಳಿದರು.
ಕೇಂದ್ರ ಸರಕಾರವು ಸಮಿತಿಗಾಗಿ ಹೆಸರುಗಳನ್ನು ಸೇರಿಸುವ ಕುರಿತು ಪರಿಶೀಲನೆ ನಡೆಸುತ್ತಿದ್ದು, ಈ ವಾರಾಂತ್ಯದೊಳಗೆ ಅದು ದೃಢಗೊಳ್ಳುತ್ತದೆ. ಬಹುತೇಕ ಮುಂದಿನ ವಾರ ನಾವು ಸಮಿತಿಯಲ್ಲಿರುವವರ ಹೆಸರುಗಳನ್ನು ಬಹಿರಂಗಪಡಿಸುತ್ತೇವೆ ಎಂದರು.
ಆಂಧ್ರಪ್ರದೇಶದಲ್ಲಿನ ಶಾಂತಿ-ಸುವ್ಯವಸ್ಥೆಯ ಕುರಿತು ಮಾತಿಗಿಳಿದಿರುವ ಚಿದಂಬರಂ, ಭಾರೀ ಪ್ರತಿಭಟನೆಗಳು ಈಗ ಕಡಿಮೆಯಾಗಿವೆ; ಅಲ್ಲಲ್ಲಿ ಕೆಲವು ಪ್ರತಿರೋಧಗಳು ಮಾತ್ರ ಕಂಡು ಬರುತ್ತಿವೆ ಎಂದಿದ್ದಾರೆ.
ಆದರೆ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿರುವುದು ತೀವ್ರ ವಿಷಾದಕರ ವಿಚಾರ. ಮಕ್ಕಳು ಯಾಕೆ ಆತ್ಮಹತ್ಯೆ ಮಾಡಿಕೊಳ್ಳಬೇಕು? ಹೆತ್ತವರು ಮತ್ತು ಶಿಕ್ಷಕರು ಇದನ್ನೆಲ್ಲ ತಡೆಯುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಇದನ್ನು ಹೊರತುಪಡಿಸಿ ಪ್ರಾಂತ್ಯದಲ್ಲಿ ಬಹುತೇಕ ಶಾಂತಿ ಮರು ಸ್ಥಾಪನೆಯಾಗಿದೆ. ನಾವು ನಮ್ಮ ಮಾತಿಗೆ ಬದ್ಧರಾಗಿದ್ದೇವೆ ಎಂದರು.
ಜನವರಿ 5ರಂದು ಆಂಧ್ರಪ್ರದೇಶದ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರ ಜತೆ ಮಾತುಕತೆ ನಡೆಸಿದ್ದ ಗೃಹಸಚಿವರು, ತೆಲಂಗಾಣ ವಿವಾದಕ್ಕೆ ಕುರಿತಂತೆ ಅಗತ್ಯ ಮಾತುಕತೆ, ಸಮಾಲೋಚನೆಗಳ ಅಗತ್ಯವಿದ್ದು ಶೀಘ್ರದಲ್ಲೇ ಅದಕ್ಕೆ ಬೇಕಾದ ರೂಪು-ರೇಷೆಗಳನ್ನು ಪ್ರಕಟಿಸುವುದಾಗಿ ಹೇಳಿದ್ದರು.
ಡಿಸೆಂಬರ್ 9ರಂದು ಪ್ರತ್ಯೇಕ ರಾಜ್ಯ ರಚಿಸುವುದಾಗಿ ಹೇಳಿಕೆ ನೀಡಿದ್ದ ನಂತರ ಭಾರೀ ಪ್ರತಿಭಟನೆಯನ್ನೆದುರಿಸಿದ ಕೇಂದ್ರ ಡಿಸೆಂಬರ್ 23ರಂದು ತನ್ನ ಮಾತನ್ನು ಹಿಂದಕ್ಕೆ ತೆಗೆದುಕೊಂಡಿತ್ತು. ಆ ಬಳಿಕ ತೆಲಂಗಾಣಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ.