ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಾಯಾಗೆ ಚಂದ್ರನಲ್ಲಿ ಜಾಗ ಕೊಡಿಸಿದ್ದವನ ಮೇಲೆ ಕೇಸು
(BSP leader | land in moon | Narendra Singh Pintu Sengar | Mayawati)
ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಹುಟ್ಟುಹಬ್ಬದಂದು ಚಂದ್ರನಲ್ಲಿ ಭೂಮಿಯನ್ನು ಖರೀದಿಸಿ ಗಿಫ್ಟ್ ಕೊಟ್ಟು ಪಕ್ಷದಿಂದಲೇ ಹೊರದಬ್ಬಿಸಿಕೊಂಡಿದ್ದ ಮಾಜಿ ಬಿಎಸ್‌ಪಿ ನಾಯಕನ ಮೇಲೀಗ ವಂಚನೆ ಪ್ರಕರಣ ದಾಖಲಾಗಿದೆ.
ಬಿಎಸ್‌ಪಿ ನಾಯಕಿಗೆ ಹುಟ್ಟುಹಬ್ಬದಂದು ಚಂದ್ರನಲ್ಲಿನ ಭೂಮಿ ಖರೀದಿಸಿ ನೀಡಿದ್ದ ಗಿಫ್ಟನ್ನು ಸಂತೋಷದಿಂದ ಸ್ವೀಕರಿಸುವ ಬದಲು ತನಿಖೆ ನಡೆಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದ ಮಾಯಾವತಿ, ಈ ಕೊಡುಗೆಯನ್ನು ನೀಡಿದ್ದ ನಾಯಕ ನರೇಂದ್ರ ಸಿಂಗ್ ಪಿಂಟು ಸೆಂಗಾರ್ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಿದ್ದರು.
ಇದೀಗ ಅವರ ವಿರುದ್ಧ ನಕಲಿ ದಾಖಲೆಗಳನ್ನೊಪ್ಪಿಸಿ ಏಳು ವರ್ಷಗಳ ಹಿಂದೆ ರಿವಾಲ್ವರ್ ಪರವಾನಗಿ ಪಡೆದುಕೊಂಡಿದ್ದ ಆರೋಪದ ಮೇಲೆ ಕಾನ್ಪುರ ಪೋಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಸೆಂಗಾರ್ ಅವರು ಕಾನ್ಪುರದಲ್ಲಿ ವಾಸವಿರುವ ಹೊರತಾಗಿಯೂ ಅವರು ಪರವಾನಗಿ ಅರ್ಜಿ ದಾಖಲೆಯಲ್ಲಿ 'ಉನ್ನಾವೋ' ಎಂಬಲ್ಲಿನ ವಿಳಾಸ ನೀಡಿದ್ದರು. ಹಾಗಾಗಿ ಅವರ ವಿರುದ್ಧ ನಕಲಿ ದಾಖಲೆಗಳನ್ನು ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಡಿಐಜಿ ಬಿ.ಜೆ. ಜಾಗ್ದಾಂದ್ ತಿಳಿಸಿದ್ದಾರೆ.
ಸೆಂಗಾರ್ ಅವರ ವಿರುದ್ಧ ಇದುವರೆಗೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ನಗರದ ಆರು ಪೊಲೀಸ್ ಠಾಣೆಗಳಲ್ಲಿ 28 ಕ್ರಿಮಿನಲ್ ಕೇಸುಗಳು ದಾಖಲಾಗಿವೆ.
ಮಾಯಾವತಿ 54ನೇ ಹುಟ್ಟುಹಬ್ಬದಂದು ಕಾನ್ಪುರದ ಸೆಂಗಾರ್ ಚಂದ್ರನ ಮೇಲಿನ ಮೂರು ಎಕರೆ ಜಮೀನನ್ನು ಗಿಫ್ಟ್ ಆಗಿ ತಮ್ಮ ನಾಯಕಿಗೆ ನೀಡಿದ್ದರು. ಅದಕ್ಕಾಗಿ ಅವರು ಅಮೆರಿಕಾದ 'ಲೂನಾರ್ ರಿಪಬ್ಲಿಕ್ ಸೊಸೈಟಿ' ಮೂಲಕ ಚಂದ್ರ ಮೇಲಿನ ಮೂರು ಎಕರೆ ಜಮೀನು ಖರೀದಿಸಿದ್ದರು.
ಈ ಸೊಸೈಟಿ ಮುಕ್ತವಾಗಿ ಚಂದ್ರ ಮೇಲಿನ ಜಮೀನನ್ನು ಮಾರಾಟ ಮಾಡುತ್ತಿದ್ದು, ನೋಂದಣಿ ಪತ್ರವನ್ನೂ ನೀಡುತ್ತದೆ. ನೋಂದಣಿ ಪತ್ರದಲ್ಲಿ ಲೂನಾರ್ ರಿಪಬ್ಲಿಕ್ ಸೊಸೈಟಿಯ ಸದಸ್ಯ ಕಾರ್ಯದರ್ಶಿ ಮಾರ್ಗರೆಟ್ ಹೇಯಸ್ ಬಾರ್ಟನ್ ಅವರ ಸಹಿಯೂ ಇರುತ್ತದೆ. ಆದರೆ ಎಷ್ಟು ಮೊತ್ತಕ್ಕೆ ಭೂಮಿಯನ್ನು ಖರೀದಿಸಲಾಗಿತ್ತು ಎಂಬುದನ್ನು ಸೆಂಗಾರ್ ಬಹಿರಂಗಪಡಿಸಿರಲಿಲ್ಲ.
ಇದರಿಂದ ಮಾಯಾ ಸಂತುಷ್ಟಕ್ಕೊಳಗಾಗಬಹುದು ಎಂದು ನಿರೀಕ್ಷಿಸಿದ್ದ ಸೆಂಗಾರ್‌ಗೆ ಆಘಾತವಾದದ್ದು ಸ್ವತಃ ತನ್ನನ್ನೇ ಪಕ್ಷದಿಂದ ಉಚ್ಛಾಟಿಸಿದಾಗ. ಇದು ಎಷ್ಟು ಸತ್ಯ ಎಂಬುದನ್ನು ತನಿಖೆ ನಡೆಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಕೇಂದ್ರ ಮಟ್ಟದಲ್ಲಿಯೂ ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದಾರೆ.