ದೆಹಲಿಯ ಏರ್‌ಪೋರ್ಟ್‌ನಿಂದ ಟ್ರ್ಯಾಕ್ಟರ್ ಕದಿಯಬಹುದೆಂದರೆ...?
ನವದೆಹಲಿ, ಶುಕ್ರವಾರ, 29 ಜನವರಿ 2010( 18:58 IST )
ರಾಜಧಾನಿಯಲ್ಲಿನ ಅತಿ ಸುರಕ್ಷಿತ, ಅದರಲ್ಲೂ ಬೆದರಿಕೆಗಳ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ತೀವ್ರ ಕಟ್ಟೆಚ್ಚರ ಘೋಷಿಸಲಾಗಿದ್ದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟ್ರ್ಯಾಕ್ಟರ್ ಒಂದನ್ನು ಕದಿಯಲಾಗಿದೆ.
ಇದು ಕಳ್ಳನ ಚಾಣಾಕ್ಷತನಕ್ಕಿಂತಲೂ ಭಾರತದ ಭದ್ರತಾ ವ್ಯವಸ್ಥೆಯ ಲೋಪವನ್ನೇ ಎತ್ತಿ ತೋರಿಸುತ್ತಿದೆ ಎಂದು ನಿರ್ವಿವಾದವಾಗಿ ಹೇಳಬಹುದಾಗಿದ್ದು, ವಿಮಾನ ಅಪಹರಣದ ಬೆದರಿಕೆಗಳನ್ನು ಎದುರಿಸುತ್ತಿರುವ ಭಾರತ ಪರಿಸ್ಥಿತಿಯನ್ನು ಎದುರಿಸಲು ನಡೆಸಿದ ಸಿದ್ಧತೆಯನ್ನು ಅಣಕಿಸುತ್ತಿದೆ ಎಂದು ಸಾರ್ವಜನಿಕ ವಲಯದಿಂದ ತೀವ್ರ ಟೀಕೆಗಳು ಬರುತ್ತಿವೆ.
ಗಣರಾಜ್ಯೋತ್ಸವ ಸಂದರ್ಭದಲ್ಲಿ ಭಯೋತ್ಪಾದಕರು ಆತ್ಮಹತ್ಯಾ ದಾಳಿ ನಡೆಸುವ ಸಾಧ್ಯತೆಗಳಿವೆ ಎಂಬ ಗುಪ್ತಚರ ಇಲಾಖೆಗಳ ಎಚ್ಚರಿಕೆ ಹಿನ್ನೆಲೆಯಲ್ಲಿ ರಾಷ್ಟ್ರದಾದ್ಯಂತದ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿತ್ತು. ಆದರೆ ದೇಶದ ಶಕ್ತಿಕೇಂದ್ರ ದೆಹಲಿಯಲ್ಲಿ ಗಣರಾಜ್ಯೋತ್ಸವಕ್ಕೆ ಕೇವಲ ಆರು ದಿನಗಳು ಬಾಕಿ ಉಳಿದಿರುವಾಗ ವಿಮಾನ ನಿಲ್ದಾಣದಿಂದಲೇ ಟ್ರ್ಯಾಕ್ಟರ್ ಒಂದನ್ನು ಕದಿಯಲಾಗಿದೆ.
ಮೂಲಗಳ ಪ್ರಕಾರ ಜನವರಿ 19ರ ಮುಂಜಾನೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್ ಏರ್‌ಲೈನ್‌ಗೆ ಸೇರಿದ್ದ ಟರ್ಮಿನಲ್ ಒಂದರ 'ಡಿ' ವಿಭಾಗದಲ್ಲಿದ್ದ ಟ್ರ್ಯಾಕ್ಟರ್ ಅನ್ನು ಕಳ್ಳ ಚಲಾಯಿಸಿಕೊಂಡು ಹೋಗಿದ್ದ. ಅದು ತಿಳಿದದ್ದು ಟ್ರ್ಯಾಕ್ಟರ್ ಸ್ಥಳದಲ್ಲಿಲ್ಲ ಎಂಬುದು ಗೊತ್ತಾದಾಗ.
ಕೊನೆಯ ಬಾರಿ ಟ್ರ್ಯಾಕ್ಟರ್ ಅನ್ನು ನಸುಕಿನ 1.20ಕ್ಕೆ ದಾಖಲಾತಿ ಮಾಡಿಸಲಾಗಿತ್ತು. ನಂತರ ಅದರ ಚಾಲಕ ಟ್ರ್ಯಾಕ್ಟರ್ ತರಲು ಹೋದಾಗ ಸ್ಥಳದಲ್ಲಿರಲಿಲ್ಲ. ವಿಮಾನ ನಿಲ್ದಾಣದೊಳಗೆ ಎಲ್ಲಾ ಕಡೆ ಹುಡುಕಿದ ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು ಎಂದು ಮೂಲಗಳು ಹೇಳಿವೆ.
ಅತೀ ಕಟ್ಟೆಚ್ಚರ ವಿಧಿಸಲಾಗಿದ್ದ ವಿಮಾನ ನಿಲ್ದಾಣದಲ್ಲಿ ಸಿಸಿಟೀವಿ ಇರುವುದು ಸಾಮಾನ್ಯವಾದರೂ, ಕಳ್ಳತನವಾದ ಕುರಿತು ಸ್ಪಷ್ಟ ಚಿತ್ರಗಳನ್ನು ನೀಡಲು ಸಿಸಿಟೀವಿ ವಿಫಲವಾಗಿದೆ. ಕಾರಣ ರಾತ್ರಿ ಹೊತ್ತು ಕೆಲವೇ ಕೆಲವು ಸಿಸಿಟೀವಿಗಳು ಮಾತ್ರ ಕೆಲಸ ಮಾಡುತ್ತಿರುವುದು.
ಟ್ರ್ಯಾಕ್ಟರ್ ಚಲಾಯಿಸಿಕೊಂಡು ಹೋಗುತ್ತಿರುವ ಚಿತ್ರ ಸಿಸಿಟೀವಿ ನೀಡಿದೆಯಾದರೂ ಅದು ಸ್ಪಷ್ಟವಿಲ್ಲ. ಚಾಲಕನ ಗುರುತನ್ನು ಇದರಿಂದ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ನಮ್ಮ ಪ್ರಕಾರ ಈ ಪ್ರಕರಣದ ಹಿಂದೆ ಇಲ್ಲಿನ ಸಿಬ್ಬಂದಿಗಳೂ ಶಾಮೀಲಾಗಿರುವ ಶಂಕೆಯಿದೆ ಎಂದು ಇದೀಗ ತನಿಖೆ ನಡೆಸುತ್ತಿರುವವರು ತಿಳಿಸಿದ್ದಾರೆ.