ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೆಲಂಗಾಣ: ಕೇಂದ್ರಕ್ಕೆ ನೀಡಿದ್ದ ಗಡುವು 10 ದಿನಗಳಿಗೆ ವಿಸ್ತರಣೆ
(Government | Telangana formation | Andhra Pradesh | P Chidambaram)
ತೆಲಂಗಾಣ: ಕೇಂದ್ರಕ್ಕೆ ನೀಡಿದ್ದ ಗಡುವು 10 ದಿನಗಳಿಗೆ ವಿಸ್ತರಣೆ
ಹೈದರಾಬಾದ್, ಶುಕ್ರವಾರ, 29 ಜನವರಿ 2010( 19:58 IST )
ತೆಲಂಗಾಣಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ಕಲ್ಪಿಸುವ ಸಲುವಾಗಿ ತೆಲಂಗಾಣ ಪ್ರಾಂತ್ಯದ ಸರ್ವಪಕ್ಷಗಳ ಜಂಟಿ ಕ್ರಿಯಾ ಸಮಿತಿಯು ಕೇಂದ್ರ ಸರಕಾರಕ್ಕೆ ವಿಧಿಸಿದ್ದ ಕಾಲಮಿತಿಯನ್ನು ಫೆಬ್ರವರಿ ಏಳರವರೆಗೆ ವಿಸ್ತರಿಸಿದೆ.
ನೀಡಿದ ಗಡುವಿನೊಳಗೆ ಪ್ರತ್ಯೇಕ ರಾಜ್ಯ ರಚನೆಯ ರೂಪು ರೇಷೆಗಳನ್ನು ಪ್ರಕಟಿಸದಿದ್ದರೆ ಎಲ್ಲಾ ಶಾಸಕರು ರಾಜೀನಾಮೆ ನೀಡುವ ಕಾಲಮಿತಿಯನ್ನು 10 ದಿನಗಳ ಕಾಲ ವಿಸ್ತರಿಸಲು ಹೈದರಾಬಾದ್‌ನಲ್ಲಿ ಸಭೆ ನಡೆಸಿದ ಜಂಟಿ ಕ್ರಿಯಾ ಸಮಿತಿಯು ನಿರ್ಧರಿಸಿತು. ಇದರೊಳಗೆ ಕೇಂದ್ರ ಸರಕಾರವು ಸಮಯ ಮಿತಿಯನ್ನೊಳಗೊಂಡ ಸಮಿತಿಯನ್ನು ಅಸ್ತಿತ್ವಕ್ಕೆ ತರಬೇಕೆಂದು ಇದರ ಜತೆ ನಿಬಂಧನೆ ಹಾಕಿದೆ.
ತೆಲಂಗಾಣ ಕುರಿತ ಸಮಿತಿಯನ್ನು ಮುಂದಿನ ವಾರ ಪ್ರಕಟಿಸುವುದಾಗಿ ಗುರುವಾರವಷ್ಟೇ ಕೇಂದ್ರ ಗೃಹಸಚಿವ ಪಿ. ಚಿದಂಬರಂ ಹೇಳಿಕೆ ನೀಡಿದ್ದರು. ಜಂಟಿ ಕ್ರಿಯಾ ಸಮಿತಿಯು ನೀಡಿದ್ದ ಗಡುವಿನ ಅಂತಿಮ ದಿನದಂದೇ ಸಚಿವರು ಹೇಳಿಕೆ ನೀಡಿದ್ದರು.
ಅದೇ ಹೊತ್ತಿಗೆ ಕೇಂದ್ರ ಸರಕಾರದ ಇತ್ತೀಚಿನ ಹೇಳಿಕೆಯು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಮತ್ತು ತೆಲಂಗಾಣ ಪರ ಪಕ್ಷಗಳಿಗೆ ಸಮಾಧಾನ ತಂದಿಲ್ಲ.
ಚಿದಂಬರಂ ಹೇಳಿಕೆಯ ನಂತರ ನಡೆದ ಜಂಟಿ ಕ್ರಿಯಾ ಸಮಿತಿ ಸಭೆಯು ಸುದೀರ್ಘ ಸಮಯದವರೆಗೆ ನಡೆದರೂ ಮುಗಿಯುವ ಸಾಧ್ಯತೆಗಳು ಕಂಡು ಬಾರದೇ ಇದ್ದ ಕಾರಣ, ಆಡಳಿತ ಪಕ್ಷ ಕಾಂಗ್ರೆಸ್ ಗಡುವನ್ನು ವಿಸ್ತರಿಸುವ ತೀರ್ಮಾನಕ್ಕೆ ಇತರ ಪಕ್ಷಗಳನ್ನು ಒಪ್ಪಿಸಿತು.
ಪ್ರಸ್ತಾವಿತ ಸಮಿತಿಯೆಂದರೆ ಅದರ ಅರ್ಥ ಪ್ರತ್ಯೇಕ ತೆಲಂಗಾಣ ರಚನೆ ಮತ್ತು ಇದಕ್ಕೆ ಕಾಲ ಮಿತಿ ಇರುತ್ತದೆ ಎಂದು ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಿದ್ದಾರೆ ಎಂದು ಕ್ರಿಯಾ ಸಮಿತಿಯ ಎಂ. ಕೋದಂಡರಾಮ ಅವರು ತಿಳಿಸಿದ್ದಾರೆ.
ಒಂದು ವೇಳೆ ಸಮಯ ಮಿತಿಯನ್ನು ನಿಗದಿಪಡಿಸದೆ ಸಮಿತಿಯನ್ನು ಪ್ರಕಟಿಸಲು ಕೇಂದ್ರ ವಿಫಲವಾದಲ್ಲಿ, ಎಲ್ಲಾ ಶಾಸಕರು ತಮ್ಮ ರಾಜೀನಾಮೆಗಳನ್ನು ಸ್ವೀಕರಿಸುವಂತೆ ಸ್ಪೀಕರ್ ಅವರ ಮೇಲೆ ಒತ್ತಡ ಹೇರಲಿದ್ದಾರೆ ಎಂದರು.