ನಿರುದ್ಯೋಗ ಮತ್ತು ಬಡತನ ಮುಂತಾದ ಪ್ರಮುಖ ಕಾರಣಗಳಿಂದಾಗಿ ಭಾರತವು ಮಕ್ಕಳ ವೇಶ್ಯಾವಾಟಿಕೆ ಜಾಲದ ಕೇಂದ್ರವಾಗುತ್ತಿದೆ. ಇದರಿಂದಾಗಿ ನಮ್ಮ ಸಾಂಸ್ಕೃತಿಕ ಮೌಲ್ಯಗಳೇ ಹಾಳಾಗುತ್ತಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಇದನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ಮಾಡಿದೆ.
ನಿಕೃಷ್ಟ ಬಡತನ ಮತ್ತು ಬೃಹತ್ ಪ್ರಮಾಣದ ನಿರುದ್ಯೋಗ ಕಾರಣಗಳಿಂದಾಗಿ ಮಕ್ಕಳ ವೇಶ್ಯಾವಾಟಿಕೆ ಭಾರೀ ಪ್ರಮಾಣದಲ್ಲಿ ಬೆಳೆದು ನಿಂತಿದೆ. ಇದರಿಂದಾಗಿ ನಮ್ಮ ಎಲ್ಲಾ ವಿಶಿಷ್ಟ ಸಾಂಸ್ಕೃತಿಕ ಲಕ್ಷಣಗಳು ಕಳೆಗುಂದುತ್ತಿವೆ. ಇಂತಹ ಚಟುವಟಿಕೆಗಳಿಗೆ ಭಾರತವು ಪ್ರಮುಖ ಕೇಂದ್ರವಾಗುತ್ತಿದೆ ಎಂದು ಅಪೆಕ್ಸ್ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಸರಕಾರೇತರ ಸಂಸ್ಥೆ 'ಬಚ್ಪನ್ ಬಚಾವೋ ಆಂದೋಲನ' ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ದಲ್ವೀರ್ ಭಂಡಾರಿ ಮತ್ತು ಎ.ಕೆ. ಪಟ್ನಾಯಕ್ ಅವರನ್ನೊಳಗೊಂಡ ಪೀಠವು, ಮಕ್ಕಳ ವೇಶ್ಯಾವಾಟಿಕೆಯನ್ನು ತಡೆಯಲು ವಿಶೇಷ ತನಿಖಾ ದಳವನ್ನು ರಚಿಸುವ ಕುರಿತು ಪರಿಶೀಲನೆ ನಡೆಸುವಂತೆ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಹ್ಮಣ್ಯಂ ಅವರಿಗೆ ಸೂಚಿಸಿತು.
ಅಲ್ಲದೆ ಮಕ್ಕಳನ್ನು ವಾಣಿಜ್ಯೀಕೃತ ಕಾಮದಾಟಕ್ಕೆ ಬಳಸುವ ವ್ಯಕ್ತಿಗಳಿಗೆ ಜಾಮೀನು ನಿರಾಕರಿಸುವ ಭರವಸೆಯನ್ನೂ ನ್ಯಾಯಾಲಯ ಇದೇ ಸಂದರ್ಭದಲ್ಲಿ ನೀಡಿದೆ.
ವೇಶ್ಯಾವಾಟಿಕಾ ಜಾಲಗಳಿಗೆ ಮಕ್ಕಳನ್ನು ತಳ್ಳುವವರ ವಿರುದ್ಧ ಐಪಿಸಿ ಸೆಕ್ಷನ್ 376ರ ಕಾನೂನನ್ನು ಯಾಕೆ ಸರಕಾರ ಬಳಸುತ್ತಿಲ್ಲ ಎಂಬುದಕ್ಕೂ ಉತ್ತರ ಬೇಕೆಂದು ನ್ಯಾಯಾಲಯ ಹೇಳಿದೆ.
ವೇಶ್ಯಾವಾಟಿಕೆಯಲ್ಲಿರುವ ಬಹುತೇಕರು ಮಕ್ಕಳು. ಅವರ ವಿರುದ್ಧ ಐಪಿಸಿ ಸೆಕ್ಷನ್ 376ರಡಿಯಲ್ಲಿ ಯಾಕೆ ಪ್ರಕರಣಗಳನ್ನು ದಾಖಲಿಸುತ್ತಿಲ್ಲ? ನೀವು ಅಂತಹ 10 ಪ್ರಕರಣಗಳನ್ನು ದಾಖಲಿಸಿದರೆ, ಸಾಕಷ್ಟು ಬದಲಾವಣೆಗಳನ್ನು ಕಾಣಬಹುದಾಗಿದೆ. ಹಾಗೆ ಮಾಡಿದಲ್ಲಿ ನ್ಯಾಯಾಲಯ ಕೂಡ ಆರೋಪಿಗಳಿಗೆ ಜಾಮೀನು ನೀಡಲು ಸಾಧ್ಯವಾಗುವುದಿಲ್ಲ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.