ಮಾಲಾಶ್ರೀ ಹೀಗೆ ಕುಡಿದು ಕುಣಿದದ್ದನ್ನು ನೆನಪಿಸುವ ಪ್ರಸಂಗ ದೂರದ ಮುಂಬೈಯಿಂದ ವರದಿಯಾಗಿದೆ. ಇಂತಹ ಮಹಾನಗರದಲ್ಲಿ ಅಪಘಾತ ಸಾಮಾನ್ಯ ಸಂಗತಿಯಾಗಿದ್ದರೂ ಮಹಿಳೆಯೊಬ್ಬಳು ಕುಡಿದು ವಾಹನ ಚಲಾಯಿಸಿ ಸಿಕ್ಕಿ ಬಿದ್ದ ಅಪರೂಪದ ಪ್ರಸಂಗವಿದು. ಘಟನೆಯಲ್ಲಿ ಯಾವುದೇ ತಪ್ಪನ್ನು ಮಾಡದ ಬೈಕ್ ಸವಾರ ಮತ್ತು ಪೊಲೀಸ್ ಪ್ರಾಣವನ್ನೂ ತೆತ್ತಿದ್ದಾರೆ.
ನೂರಿಯಾ ಯುಸುಫ್ ಅಹ್ಲುವಾಲಿಯಾ ಎಂಬ ಮಹಿಳೆ ಶನಿವಾರ ನಸುಕು ಸುಮಾರು ಒಂದು ಗಂಟೆ ಹೊತ್ತಿಗೆ ಮುಂಬೈಯ ಮರಿಯಾ ಲೈನ್ಸ್ ಬಳಿ ಆವಾಂತರ ಸೃಷ್ಟಿಸಿದ್ದು, ಪೊಲೀಸ್ ಸೇರಿದಂತೆ ಹಲವು ವಾಹನಗಳಿಗೆ ತನ್ನ ಕಾರನ್ನು ಡಿಕ್ಕಿ ಹೊಡೆಸುವ ಮೂಲಕ ಇಬ್ಬರನ್ನು ಬಲಿ ತೆಗೆದುಕೊಂಡಿದ್ದಾಳೆ.
ಘಟನೆಯ ತಕ್ಷಣವೇ ನೂರಿಯಾಳನ್ನು ಅಜಾಗರೂಕತೆಯ ಚಾಲನೆ ಮತ್ತು ಇತರ ಪ್ರಕರಣಗಳಡಿಯಲ್ಲಿ ಬಂಧಿಸಲಾಗಿದ್ದು, ಪ್ರಾಥಮಿಕ ವೈದ್ಯಕೀಯ ವರದಿಗಳ ಪ್ರಕಾರ ಆಕೆ ಮದ್ಯಪಾನ ಮಾಡಿರುವುದು ದೃಢಪಟ್ಟಿದೆ. ಆಕೆಯ ರಕ್ತದಲ್ಲಿ 457 ಎಂಎಲ್ ಆಲ್ಕೋಹಾಲ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೃತ್ತಿಪರ ಬ್ಯೂಟೀಷಿಯನ್ ದಕ್ಷಿಣ ಮುಂಬೈಯ ಕೊಲಾಬಾ ನಿವಾಸಿ 27ರ ಹರೆಯದ ನೂರಿಯಾ ಕೂಡ ಅಪಘಾತದಲ್ಲಿ ಗಾಯಗೊಂಡಿದ್ದಾಳೆ. ಅವಳನ್ನು ಪೊಲೀಸ್ ಸುಪರ್ದಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ಹೋಂಡಾ ಸಿಆರ್‌ವಿ ಕಾರಿನಲ್ಲಿ ಬರುತ್ತಿದ್ದ ನೂರಿಯಾ ಮೊದಲು ನಿಂತಿದ್ದ ಟ್ರಾಫಿಕ್ ಪೊಲೀಸರ ಕ್ವಾಲಿಸ್ ವಾಹನಕ್ಕೆ ಢಿಕ್ಕಿ ಹೊಡೆಸಿದ್ದಳು. ಬಳಿಕ ಒಂದು ಟ್ಯಾಕ್ಸಿ ಮತ್ತು ಬೈಕಿಗೆ ತನ್ನ ಕಾರನ್ನು ಗುದ್ದಿಸಿದ್ದಳು.
ಬೈಕ್ ಸವಾರ 35ರ ಹರೆಯದ ಅಫ್ಜಲ್ ಮುಖ್ಮೂಜಿಯಾ ಅವರನ್ನು ಇಲ್ಲಿನ ಸೈಫೀ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಬದುಕಿಸುವ ಯತ್ನ ಕೈಗೂಡಲಿಲ್ಲ. ಬಳಿಕ ಪೊಲೀಸ್ ಸಿಬ್ಬಂದಿಯೊಬ್ಬರು ಕೂಡ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಲಾಲಾ ಶಿಂಧೆ, ದೀನನಾಥ್ ಶಿಂಧೆ, ಶೈಲೇಂದ್ರ ಯಾದವ್, ಅಶೋಕ್ ಶಿಂಧೆ ಮತ್ತು ಅರ್ಜುನ್ ಗಾಯಕ್ವಾಡ್ ಎಂಬ ಐವರು ಪೊಲೀಸರು ಗಾಯಗೊಂಡಿದ್ದು ಬಾಂಬೆ ಹಾಸ್ಪಿಟಲ್ ಮತ್ತು ಗೋಕುಲದಾಸ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿತ್ತು. ಈಗ ಅವರಲ್ಲೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ ಎಂಬ ವರದಿಗಳು ಬಂದಿವೆ.