ಆಂಧ್ರಪ್ರದೇಶದ ಗೋದಾವರಿ ನದಿಯಲ್ಲಿ ಮಿತಿ ಮೀರಿದ ಜನರನ್ನು ಹೊತ್ತು ಸಾಗುತ್ತಿದ್ದ ದೋಣಿಯೊಂದು ಮಗುಚಿದ ಪರಿಣಾಮ 16ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 20 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಗಳು ಹೇಳಿವೆ.
ಪಶ್ಚಿಮ ಗೋದಾವರಿ ಜಿಲ್ಲೆಯ ಗೋದಾವರಿ ನದಿಯಲ್ಲಿನ ಉಪ್ಪತೇರು ಕಾಲುವೆಯಲ್ಲಿ ಶನಿವಾರ ಬೆಳಿಗ್ಗೆ ಸುಮಾರು 80 ಜನರನ್ನು ಹೊತ್ತಿದ್ದ ನರ್ಸಾಪುರ ಮಂಡಲ್‌ನಲ್ಲಿನ ಬಿಯಾಟಿಪ್ಪು ಎಂಬಲ್ಲಿಂದ ಅಂತರ್ವೇದಿ ಎಂಬಲ್ಲಿಗೆ ಪ್ರಯಾಣಿಸುತ್ತಿದ್ದ ದೋಣಿ ಮುಳುಗಡೆಯಾಗಿತ್ತು.
ಈ ಪ್ರದೇಶದ ಗ್ರಾಮಸ್ಥರು 44 ಜನರನ್ನು ರಕ್ಷಿಸಿದ್ದಾರೆ. ಪೊಲೀಸರು, ಅರಣ್ಯ ಇಲಾಖೆ ಮತ್ತು ನೌಕಾದಳದ ಸಿಬ್ಬಂದಿಗಳು ಕೂಡ ಕಾಣೆಯಾದವರನ್ನು ಹುಡುಕುತ್ತಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಪೂರ್ಣ ಚಂದ್ರ ದಿನದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಲು ಮೊಗಾಲ್ತುರು ಮತ್ತು ಇತರ ಕೆಲವು ಗ್ರಾಮಗಳ ಭಕ್ತಾದಿಗಳು ತೆರಳುತ್ತಿದ್ದರು. ಇತ್ತೀಚಿನ ಮಾಹಿತಿಗಳ ಪ್ರಕಾರ ನಾಲ್ಕು ಮಕ್ಕಳು ಮತ್ತು ಐವರು ಮಹಿಳೆಯರು ಸೇರಿದಂತೆ 16 ಶವಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಕೆ. ರೋಸಯ್ಯ, ಸಂತ್ರಸ್ತರ ಕುಟುಂಬಸ್ಥರಿಗೆ ನೆರವಿನ ಹಸ್ತ ಚಾಚುವುದಾಗಿ ಹೇಳಿದ್ದಾರೆ. ಅಲ್ಲದೆ ಘಟನೆಯ ಹಿಂದಿನ ಕಾರಣವನ್ನು ಪತ್ತೆ ಹಚ್ಚುವಂತೆ ಉನ್ನತ ಮಟ್ಟದ ತನಿಖೆಗೂ ಆದೇಶ ನೀಡಿದ್ದಾರೆ.