ಸಮಾಜವಾದಿ ಪಕ್ಷದ ಬಂಡಾಯ ನಾಯಕ ಅಮರ್ ಸಿಂಗ್ ಈಗ ಕವಲು ದಾರಿಯಲ್ಲಿದ್ದಾರೆ. ಇಬ್ಬರು ರಾಜಕೀಯ ಬದ್ಧ ವೈರಿಗಳಾದ ಮಾಯಾವತಿ ಮತ್ತು ಸೋನಿಯಾ ಗಾಂಧಿಯವರನ್ನು ಅಪಾದಮಸ್ತಕ ಹೊಗಳುತ್ತಿರುವ ಅಮರ್ ನಡೆಯೀಗ ಉತ್ತರ ಪ್ರದೇಶ ರಾಜಕೀಯ ಕ್ಷೇತ್ರದಲ್ಲಿ ಕುತೂಹಲ ಕೆರಳಿಸಿದೆ.
ಮಾಯಾವತಿಯವರ ಗಮನ ಸೆಳೆಯಲು ಯತ್ನಿಸುತ್ತಿರುವ ಅಮರ್ ಸಿಂಗ್ ಶನಿವಾರ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಎದುರಾದ ಎಲ್ಲಾ ವೈರುಧ್ಯಗಳನ್ನು ಮೆಟ್ಟಿ ನಿಂತಿರುವ ಬಿಎಸ್‌ಪಿ ನಾಯಕಿ ಮುಲಾಯಂ ಸಿಂಗ್ ಯಾದವ್ ಅವರಿಂದ 'ತೇಜೋವಧೆ' ಮಾಡಲ್ಪಟ್ಟ ನೋವನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.
ಸಮಾಜವಾದಿ ಪಕ್ಷದ ಪ್ರಮುಖ ಹುದ್ದೆಗಳಿಗೆ ರಾಜೀನಾಮೆ ನೀಡಿರುವ ಅಮರ್ ಬಹುತೇಕ ಎಲ್ಲಾ ಪಕ್ಷಗಳ ಜತೆ ಸಮರಕ್ಕಿಳಿದು ಪರ್ಯಾಯ ವ್ಯವಸ್ಥೆಯನ್ನೇ ಕಳೆದುಕೊಂಡಿರುವುದನ್ನು ಉಲ್ಲೇಖಿಸುತ್ತಾ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರತ್ತಲೂ ಹೊಗಳಿಕೆಯ ಸುರಿಮಳೆ ಸುರಿಸಿದ್ದಾರೆ.
ಎಲ್ಲಾ ವೈರುಧ್ಯಗಳ ವಿರುದ್ಧ ಮಾಯಾವತಿ ಮತ್ತು ಸೋನಿಯಾ ಗೆಲುವು ಸಾಧಿಸಿ ತಮ್ಮನ್ನು ತಾವು ಏನೆಂದು ತೋರಿಸಿಕೊಟ್ಟಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಸ್ಥಾನವನ್ನೂ ಕಳೆದುಕೊಳ್ಳುವ ಒತ್ತಡದಲ್ಲಿರುವ ಸಿಂಗ್ ತಿಳಿಸಿದ್ದಾರೆ.
ಇಬ್ಬರೂ ತಮಗೆ ಸರಿ ಕಂಡ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಂಡ ವ್ಯಕ್ತಿತ್ವದವರು. ಒಬ್ಬರು ಉತ್ತರ ಪ್ರದೇಶದಲ್ಲಿ ಈಸಿ ಜಯಿಸಿದ್ದರೆ, ಮತ್ತೊಬ್ಬರು ರಾಷ್ಟ್ರ ಮಟ್ಟದಲ್ಲಿ ಎಲ್ಲವನ್ನೂ ಮೀರಿ ನಿಂತಿದ್ದಾರೆ ಎಂದು ಟೀವಿ ವಾಹಿನಿಯೊಂದರ ಜತೆ ಮಾತನಾಡುತ್ತಾ ತಿಳಿಸಿದರು.
1995ರಲ್ಲಿ ಮುಲಾಯಂ ಸಿಂಗ್ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದುಕೊಂಡ ನಂತರ ಲಕ್ನೋದಲ್ಲಿನ ಸರಕಾರಿ ಅತಿಥಿ ಗೃಹವನ್ನು ಸುತ್ತುವರಿದು ಮಾಯಾವತಿ ಮೇಲೆ ಸಮಾಜವಾದಿ ಪಕ್ಷದ ಕಾರ್ಯಕರ್ತರು ಆಕ್ರಮಣ ನಡೆಸಿದ್ದ ಪ್ರಸಂಗವನ್ನು ಅಮರ್ ನೆನಪಿಸಿಕೊಳ್ಳುತ್ತಾ, 'ಅವರ ಅತಿಥಿ ಗೃಹ ಅಧ್ಯಾಯ ಎಷ್ಟು ನೋವು ತಂದಿರಬಹುದು ಎಂಬುದು ನನಗೀಗ ಮನವರಿಕೆಯಾಗುತ್ತಿದೆ' ಎಂದರು.
ಅಂದು ಮಾಯಾವತಿಯವರಿಗೆ ಮುಲಾಯಂ ಗುಂಪು ನೀಡಿದ್ದ ಆತಿಥ್ಯ ನನಗೂ ಸಿಕ್ಕಿದೆ. ಆದರೆ ನನಗೆ ಬೇರೆ ಆಯ್ಕೆಗಳೇ ಇಲ್ಲ ಎಂದುಕೊಂಡದ್ದು ಮಾತ್ರ ಪಕ್ಷ ಮಾಡಿದ ಪ್ರಮುಖ ತಪ್ಪು. ಒಬ್ಬ ವಕ್ತಾರನಾಗಿ ನಾವು ಆತನನ್ನು ಸಾಕಷ್ಟು ದುರ್ಬಳಕೆ ಮಾಡಿಕೊಂಡಿದ್ದೇವೆ, ಕಾಂಗ್ರೆಸ್ ಜತೆ ಕ್ರೂರವಾಗಿ ನಡೆಸಿಕೊಂಡ ಕಾರಣ ಆ ಪಕ್ಷ ಸ್ವೀಕರಿಸದು. ಎಲ್.ಕೆ. ಅಡ್ವಾಣಿಯವರ ಜತೆ ಕಾದಾಟಕ್ಕೆ ಬಿಟ್ಟ ಕಾರಣ ಬಿಜೆಪಿಯೂ ಸ್ವೀಕರಿಸದು. ಮಾಯಾವತಿಯವರ ಜತೆಗಿನ ಮುನಿಸಿನಿಂದಾಗಿ ಬಿಎಸ್‌ಪಿ ಕೂಡ ಬರ ಮಾಡಿಕೊಳ್ಳದು. ಮನೆಯ ನಾಯಿ ಬೇರೆಲ್ಲಿ ಹೋಗಬಹುದು. ಖಂಡಿತಾ ಅವನು ವಾಪಸ್ ಬರುತ್ತಾನೆ ಎಂದು ಪಕ್ಷವು ಯೋಚಿಸಿತ್ತು ಎಂದು ಅಮರ್ ವಿವರಣೆ ನೀಡಿದ್ದಾರೆ.
ಮಾಯಾವತಿಯವರ ಬಹುಜನ ಸಮಾಜವಾದಿ ಪಕ್ಷಕ್ಕೆ ಸೇರುತ್ತೀರಾ ಎಂಬ ಪ್ರಶ್ನೆಗೆ ಅಮರ್, ನಾನು ಅವರನ್ನು ಭೇಟಿಯೇ ಮಾಡಿಲ್ಲ ಎಂದಷ್ಟೇ ಉತ್ತರಿಸಿದ್ದಾರೆ.
ಅಮರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ವಕ್ತಾರ ಹಾಗೂ ಪ್ರಧಾನ ಕಾರ್ಯದರ್ಶಿ ಮೋಹನ್ ಸಿಂಗ್, ಅವರಿಗೆ ಬೇರೆ ಆಯ್ಕೆಗಳಿಲ್ಲದ ಕಾರಣ ಮಾಯಾವತಿ ಮತ್ತು ಸೋನಿಯಾರನ್ನು ಹೊಗಳುತ್ತಿದ್ದಾರೆ ಎಂದು ಖಾರವಾಗಿ ನುಡಿದಿದ್ದಾರೆ.
ನನ್ನ ಪ್ರಕಾರ ಅಮರ್ ಅವರನ್ನು ಹೊಗಳಿದ ನಂತರ ನಿಂದಿಸಲಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸುವುದೇ ಮೂರ್ಖತನವಾದೀತು. ಅವರ ವ್ಯಕ್ತಿತ್ವದಲ್ಲೇ ದೋಷವಿದೆ ಮತ್ತು ಅದು ಈಗಷ್ಟೇ ಹುಟ್ಟಿಕೊಂಡ ನ್ಯೂನತೆಯಲ್ಲ ಎಂದು ಮೋಹನ್ ವ್ಯಂಗ್ಯವಾಡಿದ್ದಾರೆ.