ಉಗ್ರರನ್ನು ಶಿಕ್ಷಿಸಿದ ಬಳಿಕವಷ್ಟೇ ಪಾಕ್ ಜತೆ ಮಾತು: ಫಾರೂಕ್
ಜಮ್ಮು, ಶನಿವಾರ, 30 ಜನವರಿ 2010( 16:23 IST )
ಮುಂಬೈ ದಾಳಿಯಲ್ಲಿ ಪಾಲ್ಗೊಂಡವರ ವಿರುದ್ಧ ಪಾಕಿಸ್ತಾನ ಕ್ರಮಗಳನ್ನು ಕೈಗೊಂಡ ಬಳಿಕವಷ್ಟೇ ಆ ದೇಶದ ಜತೆಗಿನ ಮಾತುಕತೆ ಪುನರಾರಂಭಗೊಳಿಸಲಾಗುತ್ತದೆ, ಅದಕ್ಕಿಂತ ಮೊದಲು ಸಾಧ್ಯವಿಲ್ಲ ಎಂದು ಕೇಂದ್ರ ನೂತನ ಮತ್ತು ಪುನರ್ಬಳಕೆ ಇಂಧನ ಸಚಿವ ಫಾರೂಕ್ ಅಬ್ದುಲ್ಲಾ ಸ್ಪಷ್ಟಪಡಿಸಿದ್ದಾರೆ.
ಭಯೋತ್ಪಾದನೆ ವಿರುದ್ಧದ ಭಾರತದ ನಿಲುವನ್ನು ಬೆಂಬಲಿಸಬೇಕು ಮತ್ತು ಮುಂಬೈ ದಾಳಿಯ ರೂವಾರಿಗಳನ್ನು ಶಿಕ್ಷಿಸಬೇಕು. ಅದಕ್ಕಿಂತ ಮೊದಲು ಆ ದೇಶದ ಜತೆ ರಾಜತಾಂತ್ರಿಕ ಮಾತುಕತೆ ಅಸಾಧ್ಯ ಎಂದು ಜಮ್ಮು-ಕಾಶ್ಮೀರ ಶಾಂತಿ ಸಂಘಟನೆ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 'ಶಾಹೀದಿ ದಿವಸ್' ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಫಾರೂಕ್ ತಿಳಿಸಿದರು.
ಮುಂಬೈ ದಾಳಿಕೋರರು ಮತ್ತು ಪಿತೂರಿದಾರರ ವಿರುದ್ಧ ಪಾಕಿಸ್ತಾನವು ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂಬುದು ಭಾರತಕ್ಕೆ ಮನವರಿಕೆಯಾದ ನಂತರ ಮಾತುಕತೆ ಪುನರಾರಂಭವಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು ಹೇಳಿದರು.
ಜಮ್ಮು-ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯುದ್ದಕ್ಕೂ ಭಯೋತ್ಪಾದಕರ ನುಸುಳುವಿಕೆ ಯತ್ನಗಳು ನಿರಂತರವಾಗಿ ಮುಂದುವರಿಯುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ನುಸುಳುಕೋರರ ಯತ್ನಗಳನ್ನು ವಿಫಲಗೊಳಿಸಲು ನಮ್ಮ ಪಡೆಗಳು ಸಿದ್ಧವಾಗಿವೆ ಎಂದರು.
ಜಮ್ಮು-ಕಾಶ್ಮೀರದ ಪ್ರಕ್ಷ್ಯುಬ್ಧತೆಯ ಪರಿಹಾರಕ್ಕೆ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ ಸೂಚಿಸಿದ್ದ ಸೈದ್ಧಾಂತಿಕ ಸೂತ್ರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೆಲವು ಹೇಳಿಕೆಗಳು ಅವರ ಸ್ವಂತ ಜನರ ಬಳಕೆಗೆ ಅರ್ಹವಾದುದು ಮತ್ತು ಅವರು ಅವರಿಗೆ ಏನು ಬೇಕಾಗಿದೆ ಎಂಬುದನ್ನು ಮಾತ್ರ ಹೇಳುತ್ತಿದ್ದಾರೆ ಎಂದರು.