ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಕಿಸ್ತಾನಿ ಆಟಗಾರರನ್ನು ಸೇರಿಸಬೇಕಿತ್ತು ಎಂದು ಬಾಲಿವುಡ್ ಸೂಪರ್‌ಸ್ಟಾರ್ ಶಾರೂಖ್ ಖಾನ್ ಹೇಳಿದ್ದಕ್ಕೆ ತರಾಟೆಗೆ ತೆಗೆದುಕೊಂಡ ಬೆನ್ನಿಗೆ ಇದೇ ನಿಲುವು ಪ್ರಕಟಿಸಿದ್ದ ಅಮೀರ್ ಖಾನ್ ಅವರನ್ನೂ ತೆಗಳಿರುವ ಶಿವಸೇನೆ, ಖಾನ್ ಜೋಡಿಯನ್ನು 'ಇಬ್ಬರು ಈಡಿಯೆಟ್‌ಗಳು' ಎಂದು ಜರೆದಿದೆ.
ಪಾಕಿಸ್ತಾನದ ಆಟಗಾರರನ್ನು ಬೆಂಬಲಿಸುವ ಅವಿವೇಕತನದ ಹೇಳಿಕೆ ನೀಡಿರುವ ಅಮೀರ್ ಖಾನ್ ಮತ್ತು ಶಾರೂಖ್ ಖಾನ್ ನಿಜ ಜೀವನದ 'ಇಬ್ಬರು ಮೂರ್ಖ'ರೆಂದು ಸಾಬೀತಾಗಿದೆ ಎಂದು ಪಕ್ಷದ ಹಿಂದಿ ಮುಖವಾಣಿ 'ದೋಪಹಾರ್ ಕಾ ಸಾಮ್ನಾ'ದಲ್ಲಿ ಬರೆಯಲಾಗಿದೆ.
ಒಂದು ಕಡೆ ಶಾರೂಖ್ ಪಾಕಿಸ್ತಾನಿ ಆಟಗಾರರ ಕಡೆಗೆ ತನ್ನ ಪ್ರೀತಿಯನ್ನು ಬಹಿರಂಗವಾಗಿ ಹರಿಸುತ್ತಿದ್ದರೆ, ಮತ್ತೊಂದೆಡೆ ಅಮೀರ್ ರಾಷ್ಟ್ರೀಯತಾವಾದದ ಭಾವನೆಗಳನ್ನೇ ಪಣವಾಗಿಟ್ಟಿದ್ದಾರೆ ಎಂದು ಅಪರಾಹ್ನ ಮಾರುಕಟ್ಟೆಗೆ ಬರುವ ಟ್ಯಾಬ್ಲಾಯ್ಡ್ ಪತ್ರಿಕೆಯಲ್ಲಿ ಶಿವಸೇನೆ ಕಿಡಿ ಕಾರಿದೆ.
ಅಮೀರ್ ಪ್ರಕಾರ ಒಬ್ಬ ಉತ್ತಮ ಆಟವಾಡುವ ಕ್ರಿಕೆಟಿಗನಿದ್ದರೆ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಲು ಬಯಸುತ್ತಾರೆ. ಅವರಿಗೆ ಆಟಗಾರ ಯಾವ ದೇಶದವನು ಎಂಬುದು ಪ್ರಶ್ನೆಯೇ ಅಲ್ಲ, ಅದರ ವ್ಯತ್ಯಾಸವೇ ಅವರಿಗಿಲ್ಲ ಎಂದು 'ಪರಿಪೂರ್ಣತಾವಾದಿ' ಎಂದೇ ಬಾಲಿವುಡ್‌ನಲ್ಲಿ ಗುರುತಿಸಿಕೊಳ್ಳುವ ನಟ, ನಿರ್ದೇಶಕನನ್ನು ಸೇನೆ ಹೀಗಳೆದಿದೆ.
ಇತ್ತೀಚೆಗಷ್ಟೇ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ '3 ಈಡಿಯೆಟ್ಸ್' ಚಿತ್ರಕ್ಕೆ ಡಿಜಿಟಲ್ ಟಚ್ ಕೊಟ್ಟಿರುವ ಪತ್ರಿಕೆ ಮುಖಪುಟದಲ್ಲೇ ಇಬ್ಬರೂ ಖಾನ್‌ಗಳ ಚಿತ್ರವನ್ನು ಪ್ರಕಟಿಸಿದೆ. ಈ ಚಿತ್ರದಲ್ಲಿ ಅಮೀರ್ ಖಾನ್ ಡ್ರಮ್‌ನೊಳಗಿಂದ ಇಣುಕುತ್ತಿದ್ದರೆ, ಮತ್ತೊಂದು ಡ್ರಮ್ಮಿನೊಳಗಿಂದ ಶಾರೂಖ್ ತುಟಿಯನ್ನು ಮುದ್ದಿಸುವಂತೆ ತೋರಿಸುವ ಚಿತ್ರವನ್ನು '2 ಈಡಿಯೆಟ್ಸ್' ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಲಾಗಿದೆ.
ನನಗೆ ಆಟಗಾರರ ನಿರ್ವಹಣೆ ಮುಖ್ಯವೇ ಹೊರತು, ಅವರು ಯಾವ ದೇಶದವರೆಂದಲ್ಲ. ನಾನು ಎಲ್ಲಾದರೂ ಐಪಿಎಲ್ ಫ್ರಾಂಚೈಸಿ ಮಾಲಕನಾಗಿರುತ್ತಿದ್ದರೆ ಆಟಗಾರ ಯಾವ ರಾಷ್ಟ್ರದವನು ಎಂದು ಗಮನಿಸುತ್ತಿರಲಿಲ್ಲ ಎಂದು ಅಮೀರ್ ಶುಕ್ರವಾರ ಹೇಳಿಕೆ ನೀಡಿದ್ದರು.