ಗೋವಾ ಸರ್ಕಾರ ನೆಚ್ಚಿನ ತಾಣವಾದ ಬೀಚ್‌ಗಳಲ್ಲಿ ಬಿಕಿನಿ ಧರಿಸುವುದಕ್ಕೆ ನಿಷೇಧ ಹೇರಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಯನ್ನು ಸಾರಸಗಟಾಗಿ ತಳ್ಳಿಹಾಕಿರುವ ಗೋವಾ ಪ್ರವಾಸೋದ್ಯಮ ಇಲಾಖೆ, ಬಿಕಿನಿ ಧರಿಸುವುದಕ್ಕೆ ನಾವು ನಿಷೇಧ ಹೇರಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ರವಾಸಿ ತಾಣಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಹಿನ್ನೆಲೆಯಲ್ಲಿ ಗೋವಾ ಬೀಚ್‌ಗಳಲ್ಲಿ ಬಿಕಿನಿ ಧರಿಸುವುದನ್ನು ನಿಷೇಧಿಸಲಾಗುವುದು ಎಂಬ ಮಾಧ್ಯಮಗಳ ವರದಿಯನ್ನು ಪ್ರವಾಸೋದ್ಯಮ ಸಚಿವ ಫ್ರಾನ್ಸಿಸ್ಕೋ ಪಾಚೆಕೋ ತಳ್ಳಿಹಾಕಿದ್ದಾರೆ.
ಗೋವಾ ಬೀಚ್‌ಗಳಲ್ಲಿ ಬಿಕಿನಿ ನಿಷೇಧಿಸುವ ಪ್ರಶ್ನೆಯೇ ಇಲ್ಲ. ಆದರೆ ಬೀಚ್‌ಗಳಲ್ಲಿ ಬಿಕಿನಿ ಧರಿಸದೇ ಇರಬೇಡಿ ಎಂಬಂತಹ ಸರ್ಕಾರಿ ಪ್ರಾಯೋಜಿತ ಜಾಹೀರಾತನ್ನು ಹಾಕಲು ನಿರ್ಧರಿಸಿರುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು.
ರಾಜ್ಯದ ಪ್ರಸಿದ್ಧ ಬೀಚ್‌ಗಳಲ್ಲಿ ಸರ್ಕಾರ ಬಿಕಿನಿ ನಿಷೇಧ ಹೇರಲು ಮುಂದಾಗಿದೆ ಎಂಬ ಮಾಧ್ಯಮದ ವರದಿಯ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರವಾಸಿಗರು ಈಜುಡುಗೆ ಇಲ್ಲದೆಯೇ ಸಮುದ್ರದಲ್ಲಿ ಸ್ನಾನ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಅಲ್ಲದೇ, ಬೀಚ್‌ಗಳಲ್ಲಿ ಈಜುಡುಗೆ ಧರಿಸುವುದು ಅಶ್ಲೀಲ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೊಂದು ಕೌಟುಂಬಿಕ ಪ್ರವಾಸಿ ತಾಣವಾಗಿದೆ. ನೆರೆಯ ರಾಜ್ಯಗಳು ಸೇರಿದಂತೆ ವಿವಿಧೆಡೆಯಿಂದ ಲಕ್ಷಾಂತರ ಪ್ರವಾಸಿಗರು ಗೋವಾ ಬೀಚ್‌ಗಳಿಗೆ ಆಗಮಿಸುತ್ತಾರೆ. ಇಲ್ಲಿನ ಬೀಚ್‌ಗಳಲ್ಲಿ ಸೂರ್ಯ ಸ್ನಾನಕ್ಕಾಗಿಯೇ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಹಾಗಾಗಿ ಬೀಚ್‌ಗಳಲ್ಲಿ ಬಿಕಿನಿ ನಿಷೇಧಿಸುವ ಯಾವ ಚಿಂತನೆಯೂ ಸರ್ಕಾರಕ್ಕಿಲ್ಲ ಎಂದರು.
ಗೋವಾದಲ್ಲಿ ಸೆಕ್ಸ್ ಪ್ರವಾಸೋದ್ಯಮ ಹೆಚ್ಚು ಎಂಬಂತೆ ತಪ್ಪಾಗಿ ಬಿಂಬಿಸಲಾಗುತ್ತಿರುವುದನ್ನು ಪ್ರವಾಸೋದ್ಯಮ ಸಚಿವಾಲಯ ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿದರು. ಬೀಚ್‌ಗಳಲ್ಲಿ ಬಿಕಿನಿ ಧರಿಸಬಾರದು ಎಂಬಂತಹ ಜಾಹೀರಾತು ನೀಡಲು ನಾವು ಯಾಕೆ ನಿರ್ದೇಶನ ನೀಡುತ್ತೇವೆ ಎಂದು ಪ್ರಶ್ನಿಸಿದರು.