ಭಾರತದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಯೋಜಿಸುತ್ತಿರುವ ಪಾಕಿಸ್ತಾನವು, ಭಾರತೀಯ ಜಿಹಾದಿಗಳಿಗೆ ಕರಾಚಿಯಲ್ಲಿ ತನ್ನ ಗುಪ್ತಚರ ಸಂಸ್ಥೆ ಐಎಸ್ಐ ಮೂಲಕ ತರಬೇತಿ ನೀಡುತ್ತಿದೆ ಎಂದು ವರದಿಗಳು ಹೇಳಿವೆ.
ಡೇವಿಡ್ ಕೋಲ್ಮನ್ ಹೆಡ್ಲಿ ಮತ್ತು ಮೊಹಮ್ಮದ್ ಅಹ್ಮದ್ ಖ್ವಾಜಾ ಈ ವಿಧ್ವಂಸಕ ಕೃತ್ಯಗಳ ಯೋಜನೆಯನ್ನು ಪೊಲೀಸರಲ್ಲಿ ಬಾಯ್ಬಿಟ್ಟಿದ್ದಾರೆ ಎಂದು ಹೇಳಲಾಗಿದೆ.
ಹೆಡ್ಲಿಯನ್ನು ಕಳೆದ ವರ್ಷ ಅಮೆರಿಕಾದ ಎಫ್‌ಬಿಐ ಚಿಕಾಗೋದಲ್ಲಿ ಬಂಧಿಸಿತ್ತು. ಆತ 2008ರ ಮುಂಬೈ ದಾಳಿಗಾಗಿ ಪಾಕಿಸ್ತಾನ ಮೂಲದ ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆಯ ಪರವಾಗಿ ಕೆಲಸ ಮಾಡಿದ್ದ ಹಾಗೂ ಮುಂಬೈ ಮತ್ತು ಇನ್ನಿತರ ಭಾರತೀಯ ನಗರಗಳಲ್ಲಿ ಸ್ಫೋಟ ನಡೆಸಲು ಯೋಜನೆಗಳನ್ನು ರೂಪಿಸಿದ್ದ ಎಂದು ಆರೋಪಿಸಲಾಗಿದೆ.
ಬಾಂಗ್ಲಾದೇಶ ಮೂಲಕ ಹರ್ಕತ್ ಉಲ್ ಜಿಹಾದ್ ಇ ಇಸ್ಲಾಮಿ (ಹುಜಿ) ಸಂಘಟನೆಯ ಸದಸ್ಯ ಹಾಗೂ ದಕ್ಷಿಣ ಭಾರತ ಕಮಾಂಡರ್ ಎಂದು ಹೇಳಲಾಗಿರುವ ಖ್ವಾಜಾನನ್ನು ಇದೇ ವರ್ಷದ ಜನವರಿ 18ರಂದು ಹೈದರಾಬಾದ್ ಪೊಲೀಸರು ಚೆನ್ನೈಯಲ್ಲಿ ಬಂಧಿಸಿದ್ದರು. ಪ್ರಸಕ್ತ ಆತ ಆಂಧ್ರಪ್ರದೇಶ ಪೊಲೀಸರ ವಶದಲ್ಲಿದ್ದಾನೆ.
ಭಾರತದಲ್ಲಿ ನಡೆಸುವ ಈ ವಿಧ್ವಂಸಕ ಕೃತ್ಯಕ್ಕೆ 'ಕರಾಚಿ ಪ್ರೊಜೆಕ್ಟ್' ಎಂದು ಹೆಸರಿಡಲಾಗಿದೆ ಎಂದು ಹೆಡ್ಲಿ ಎಫ್‌ಬಿಐ ಅಧಿಕಾರಿಗಳಲ್ಲಿ ಬಹಿರಂಗಪಡಿಸಿದ್ದಾನೆ. ಭಾರತದೊಂದಿಗೆ ನಿರಂತರ ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುವ ಎಫ್‌ಬಿಐ ಈ ವಿವರಗಳನ್ನು ನವದೆಹಲಿಗೆ ಹಸ್ತಾಂತರಿಸಿದೆ.
ಆತನ ಪ್ರಕಾರ ಭಾರತೀಯ ಪ್ರಜೆಗಳಿಗೆ ಸತತವಾಗಿ ಐಎಸ್ಐ ಮತ್ತು ಲಷ್ಕರ್ ಇ ತೋಯ್ಬಾಗಳು ಭಾರೀ ಮಟ್ಟದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ತರಬೇತಿ ನೀಡುತ್ತಿವೆ. ಒಂದು ಬಾರಿ ತರಬೇತಿ ಮುಗಿದ ನಂತರ ತಮಗೆ ಒಪ್ಪಿಸಲಾಗುವ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಈ ಭಾರತೀಯ ಜಿಹಾದಿಗಳನ್ನು ಭಾರತಕ್ಕೆ ಮರಳಿ ಕಳುಹಿಸಲಾಗುತ್ತದೆ ಎಂದು ಹೆಡ್ಲಿ ತಿಳಿಸಿದ್ದಾನೆಂದು ಮೂಲಗಳು ಹೇಳಿವೆ.
ಸೌದಿ ಅರೇಬಿಯಾದಿಂದ ಪಾಕಿಸ್ತಾನದ ಪಾಸ್‌ಪೋರ್ಟ್ ಮೂಲಕ ಭಾರತಕ್ಕೆ ಮರಳಿದ್ದ ಖ್ವಾಜಾ ಕೂಡ ಐಎಸ್ಐ ಮತ್ತು ಲಷ್ಕರ್ ಇ ತೋಯ್ಬಾದ ಜಂಟಿ ಯೋಜನೆ 'ಕರಾಚಿ ಪ್ರೊಜೆಕ್ಟ್' ಬಗ್ಗೆ ಮಾಹಿತಿ ನೀಡಿದ್ದಾನೆ.
ಭಾರತದ ಉಗ್ರನೇ ಆಗಿರುವ ಖ್ವಾಜಾ ಪ್ರಕಾರ, ಕರಾಚಿಯಲ್ಲಿ ಭಾರೀ ಮಟ್ಟದಲ್ಲಿ ಭಾರತೀಯರಿಗೆ ಜಿಹಾದಿ ತರಬೇತಿ ನೀಡಲಾಗುತ್ತಿದೆ ಮತ್ತು ಅವರು ಉತ್ಕಷ್ಟ ಗುಣಮಟ್ಟವನ್ನು ಹೊಂದಿದ್ದಾರೆ.