ವಿಸ್ತಾರದಲ್ಲಿ ಕರ್ನಾಟಕಕ್ಕಿಂತ ಸರಿಸುಮಾರು ಒಂಬತ್ತು ಪಟ್ಟು ಚಿಕ್ಕದಾಗಿರುವ ಮತ್ತು ಕೇವಲ 25 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಮೇಘಾಲಯ ಎಂಬ ಪುಟ್ಟ ರಾಜ್ಯಕ್ಕೀಗ ನಾಲ್ವರು ಮುಖ್ಯಮಂತ್ರಿಗಳು!
ಸಂವಿಧಾನಾತ್ಮಕವಾಗಿ ಡಿ.ಡಿ. ಲಪಾಂಗ್ ಅವರೇ ಮುಖ್ಯಮಂತ್ರಿಯಾಗಿದ್ದರೂ, ಮೈತ್ರಿ ಸರಕಾರವನ್ನು ಸರಿದೂಗಿಸುವ ಯತ್ನದಂಗವಾಗಿ ಇತರ ಮೂವರಿಗೆ ಮುಖ್ಯಮಂತ್ರಿಯವರ ಸ್ಥಾನ-ಮಾನಗಳನ್ನು ನೀಡುವಂತೆ ಅಧಿಸೂಚನೆ ಹೊರಡಿಸಲಾಗಿದೆ.
ದೇಶದಲ್ಲೇ ಅತಿ ವೇಗದಲ್ಲಿ ಮುಖ್ಯಮಂತ್ರಿಗಳನ್ನು ಬದಲಾಯಿಸುತ್ತಿರುವ ರಾಜ್ಯ ಎಂಬ ಕುಖ್ಯಾತಿ ಬೆನ್ನಿಗಂಟಿಸಿಕೊಂಡಿರುವ ಮೇಘಾಲಯದ ಹೊಸ ದಾಖಲೆಯ ಪ್ರಕಾರ ಓರ್ವ ರಾಜ್ಯಪಾಲರಿಂದ ಪ್ರಮಾಣವಚನವನ್ನು ಬೋಧಿಸಿಕೊಂಡವರಾಗಿದ್ದರೆ, ಮತ್ತಿಬ್ಬರಿಗೆ ಈ ಹಿಂದೆಯೇ ಮುಖ್ಯಮಂತ್ರಿಯ ಸ್ಥಾನ ನೀಡಲಾಗಿತ್ತು. ಇದೀಗ ಮತ್ತೊಬ್ಬರಿಗೂ ಅದೇ ಸ್ಥಾನಕ್ಕೇರಿಸಲಾಗಿದೆ.
ಮೇಘಾಲಯ ಮಾಹಿತಿ ಮತ್ತು ಸಾರ್ವಜನಿಕ ವ್ಯವಹಾರಗಳ ನಿರ್ದೇಶನಾಲಯವು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯ ಪ್ರಕಾರ, ಶಾಸಕ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿರುವ ಲಿಂಗ್ಡಾಹ್ ಈಗಾಗಲೇ ಮುಖ್ಯಮಂತ್ರಿಯವರ ಸ್ಥಾನಮಾನ ನೀಡಲಾಗಿದೆ. ಅಚ್ಚರಿಯ ವಿಚಾರವೆಂದರೆ ಅವರು ರಾಜ್ಯದ ಉಪಮುಖ್ಯಮಂತ್ರಿಯೂ ಹೌದು!
ಉಪಮುಖ್ಯಮಂತ್ರಿಯಾಗಿರುವ ಲಿಂಗ್ಡಾಹ್ ಅವರಿಗೆ ಮುಖ್ಯಮಂತ್ರಿಯಾಗಿ ಬಡ್ತಿ ನೀಡಲಾಗಿದೆ. ಅವರು ಅಧಿಕೃತ ಮುಖ್ಯಮಂತ್ರಿ ಲಪಾಂಗ್ ಅವರ ರಾಜಕೀಯ ಸಲಹಾಗಾರರಾಗಿ ಮುಂದುವರಿಯಲಿದ್ದಾರೆ ಎಂದು ಜನವರಿ 28ರಂದು ಬಿಡುಗಡೆ ಮಾಡಲಾಗಿರುವ ಅಧಿಕೃತ ಸೂಚನೆಯಲ್ಲಿ ವಿವರಣೆ ನೀಡಲಾಗಿದೆ.
ಕಳೆದ ವರ್ಷದ ಮೇ 13ರಂದು ರಾಜ್ಯಪಾಲ ಆರ್.ಎಸ್. ಮೂಸಾರೇ ಅವರಿಂದ ಪ್ರಮಾಣ ವಚನ ಸ್ವೀಕರಿಸಿರುವ ಮುಖ್ಯಮಂತ್ರಿ ಡಾರ್ವಿಂಗ್ ಡಿಯೆಂಗ್ ಲಪಾಂಗ್ ಜತೆಗೆ ಲಿಂಗ್ಡಾಹ್ ಕೂಡ ಆ ಹುದ್ದೆಗೇರಿದ ಬೆನ್ನಿಗೆ ರಾಜ್ಯ ಯೋಜನಾ ಮಂಡಳಿಯ ಅಧ್ಯಕ್ಷ ಡೊಂಕುಪರ್ ರಾಯ್ ಮತ್ತು ಮೇಘಾಲಯ ಆರ್ಥಿಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಜೆ.ಡಿ. ರಿಂಬೈ ಅವರಿಗೂ ಮುಖ್ಯಮಂತ್ರಿ ಸ್ಥಾನಕ್ಕೆ ಬಡ್ತಿ ನೀಡಲಾಗಿದೆ!
ರಾಯ್ ಮತ್ತು ರಿಂಬೈ ಇವರಿಬ್ಬರೂ ಈ ಹಿಂದೆ ರಾಜ್ಯದ ಅಧಿಕೃತ ಮುಖ್ಯಮಂತ್ರಿಗಳಾಗಿದ್ದವರು. ಇವಿಷ್ಟನ್ನೇ ಅರಗಿಸಿಕೊಳ್ಳಲು ಹೆಣಗಾಡುತ್ತಿರುವ ಪುಟ್ಟ ರಾಜ್ಯಕ್ಕೆ ಮತ್ತಿಬ್ಬರು ಉಪ ಮುಖ್ಯಮಂತ್ರಿಗಳೂ ಇದ್ದಾರೆ. ಮುಕುಲ್ ಸಂಗ್ಮಾ ಮತ್ತು ಬಿಂಡೋ ಲಾಲಾಂಗ್ ಅವರು ಇದೀಗ ರಾಜ್ಯದ ಡಿಸಿಎಂಗಳು.
60 ಶಾಸಕರನ್ನು ಹೊಂದಿರುವ ಮೇಘಾಲಯ ವಿಧಾನಸಭೆಯಲ್ಲಿ ಅಧಿಕಾರದಲ್ಲಿರುವ ಮೇಘಾಲಯ ಮೈತ್ರಿಕೂಟ ಒಟ್ಟು 37 ಶಾಸಕ ಬಲವನ್ನು ಹೊಂದಿದೆ. ಇದರಲ್ಲಿ ಕಾಂಗ್ರೆಸ್‌ನ 28 ಮತ್ತು ಯುಡಿಪಿ 9 ಶಾಸಕರಿದ್ದಾರೆ. ಮಾರ್ಚ್ 2008ರ ವಿಧಾನಸಭಾ ಚುನಾವಣೆ ನಂತರ ಲಪಾಂಗ್ ಅವರದ್ದು ಇದು ಮೂರನೇ ಸರಕಾರ!
ಸಂವಿಧಾನಾತ್ಮಕ ಅಧಿಕಾರವನ್ನು ಲಪಾಂಗ್ ಮಾತ್ರ ಹೊಂದಿರುವರಾದರೂ, ಇಂತಹ ಅಸಂವಿಧಾನಾತ್ಮಕ ಅಧಿಕಾರ ಹಂಚಿಕೆ ವ್ಯವಸ್ಥೆಯನ್ನು ಇತರ ಹಲವು ಪ್ರಮುಖ ಪಕ್ಷಗಳು ಹಾಗೂ ತಜ್ಞರು ಟೀಕಿಸಿದ್ದಾರೆ.