ದಕ್ಷಿಣ ಭಾರತವನ್ನು ನೋಡ್ಕೊಳ್ಳಿ ಸಾಕು: ಆರೆಸ್ಸೆಸ್‌ಗೆ ಶಿವಸೇನೆ
ಮುಂಬೈ, ಸೋಮವಾರ, 1 ಫೆಬ್ರವರಿ 2010( 13:25 IST )
ಮುಂಬೈ ಎಲ್ಲಾ ಭಾರತೀಯರಿಗೆ ಸೇರಿದ್ದು ಮತ್ತು ಉತ್ತರ ಭಾರತೀಯರನ್ನು ರಕ್ಷಿಸಬೇಕಾಗಿದೆ ಎಂದು ಹೇಳಿಕೆ ನೀಡಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ತಿರುಗೇಟು ನೀಡಿರುವ ಶಿವಸೇನೆ, ಮುಂಬೈಯಲ್ಲಿನ ಉತ್ತರ ಭಾರತೀಯರ ವಿಚಾರ ನಿಮಗೆ ಬೇಡ; ನೀವು ದಕ್ಷಿಣ ಭಾರತದಲ್ಲಿರುವ ಉತ್ತರ ಭಾರತೀಯರನ್ನು ರಕ್ಷಿಸಿದರೆ ಸಾಕು ಎಂದು 'ಬುದ್ಧಿಮಾತು' ಹೇಳಿದೆ.
ಆರೆಸ್ಸೆಸ್ ಮುಖಂಡ ರಾಮ್ ಮಾಧವ್ ಅವರು ಮಾತನಾಡುತ್ತಾ, ಮುಂಬೈಯಲ್ಲಿ ಶಿವಸೇನೆಯಿಂದ ದಾಳಿಗೀಡಾಗುತ್ತಿರುವ ಉತ್ತರ ಭಾರತೀಯರನ್ನು ರಕ್ಷಿಸಬೇಕು, ನಾವೆಲ್ಲರೂ ಭಾರತೀಯರು. ಆರೆಸ್ಸೆಸ್ ಇಂತಹ ದಾಳಿಗಳನ್ನು ಸಹಿಸುವುದಿಲ್ಲ ಎಂದಿದ್ದರು.
PTI
ಇದಕ್ಕೆ ಶಿವಸೇನೆ ತನ್ನ ಮುಖವಾಣಿ 'ಸಾಮ್ನಾ'ದಲ್ಲಿ ಆರೆಸ್ಸೆಸ್ಸನ್ನು ತರಾಟೆಗೆ ತೆಗೆದುಕೊಂಡಿದೆ. ಮುಂಬೈಯಲ್ಲಿನ ಉತ್ತರ ಭಾರತೀಯರ ಚಿಂತೆ ನಿಮಗೆ ಬೇಡ. ಅಷ್ಟಕ್ಕೂ ಆಸಕ್ತಿಯಿದ್ದರೆ ದಕ್ಷಿಣ ಭಾರತದಲ್ಲಿ ಹಿಂದಿ ನಲುಗುತ್ತಿರುವುದನ್ನು ಗಮನಿಸಿ. ಅಲ್ಲಿರುವ ಉತ್ತರ ಭಾರತೀಯರನ್ನು ರಕ್ಷಿಸಿ. ಅಲ್ಲಿ ಹಿಂದಿ ಭಾಷೆಗೆ ಒದಗಿರುವ ಸ್ಥಿತಿಯನ್ನು ಉದ್ಧಾರಗೊಳಿಸಿ ಎಂದು ಸೇನೆಯ ಕಾರ್ಯನಿರ್ವಾಹಕ ಅಧ್ಯಕ್ಷ ಉದ್ಧವ್ ಠಾಕ್ರೆ ಹೇಳಿಕೆ ನೀಡಿದ್ದಾರೆ.
ಮುಂಬೈ ವಿಚಾರದಲ್ಲಿ ಆರೆಸ್ಸೆಸ್ ಯಾವುದೇ ಹೇಳಿಕೆಯನ್ನು ನೀಡಬಾರದು. ಈ ನಗರವು ಮಹಾರಾಷ್ಟ್ರ ಮತ್ತು ಮರಾಠಿ ಮಾನೂಗಳಿಗೆ ಸೇರಿದ್ದು. ನಿಮಗೆ ಹಿಂದಿಯನ್ನು ರಕ್ಷಿಸಬೇಕೆಂಬ ಇರಾದೆಯಿದ್ದರೆ ದಕ್ಷಿಣ ಭಾರತದ (ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಕೇರಳ ಮುಂತಾದ ರಾಜ್ಯಗಳು) ಕುರಿತು ಮಾತನಾಡಿ ಎಂದು ಸಾಮ್ನಾದ ಲೇಖನದಲ್ಲಿ ಉದ್ಧವ್ ಬರೆದಿದ್ದಾರೆ.
ಅಲ್ಲದೆ 1992ರ ಹಿಂಸಾಚಾರದಲ್ಲಿ ಹಿಂದೂಗಳನ್ನು ರಕ್ಷಿಸಿದ್ದು ಶಿವಸೇನೆಯೇ ಹೊರತು ಆರೆಸ್ಸೆಸ್ ಅಲ್ಲ. ವ್ಯಾಪ್ತಿಯನ್ನು ಬಿಟ್ಟು ಹೊರಗಿನ ವಿಚಾರ ನಿಮಗೆ ಬೇಕಿಲ್ಲ ಎಂದು ಆರೆಸ್ಸೆಸ್‌ಗೆ ಠಾಕ್ರೆ ಪಕ್ಷವು ಎಚ್ಚರಿಕೆಯನ್ನೂ ರವಾನಿಸಿದೆ.
ಆರೆಸ್ಸೆಸ್ ಮತ್ತು ಶಿವಸೇನೆ ನಡುವಿನ ಈ ಭಿನ್ನಾಭಿಪ್ರಾಯಗಳು ತೀವ್ರ ಕುತೂಹಲ ಕೆರಳಿಸಿರುವಂತೆಯೇ ಬಿಜೆಪಿ ಕೂಡ ಸೇನೆಯ ವಿರುದ್ಧ ಕಿಡಿ ಕಾರಿದೆ.
ರಾಜ್ಯ ಬಿಜೆಪಿಯ ಉಪಾಧ್ಯಕ್ಷ ಶಾಂತ ಕುಮಾರ್ ಮಾತನಾಡುತ್ತಾ, ಭಾರತವು ಪ್ರತಿಯೊಬ್ಬರಿಗೂ ಸೇರಿದ್ದು; ಕೇವಲ ರಾಜಕೀಯಕ್ಕಾಗಿ ನಾವು ದೇಶವನ್ನು ವಿಭಜನೆ ಮಾಡುವುದಿಲ್ಲ. ಆರೆಸ್ಸೆಸ್ ಹೇಳಿದ್ದು ಸರಿಯಾಗಿಯೇ ಇದೆ ಎಂದಿದ್ದಾರೆ.
ಇಡೀ ಭಾರತವು ಭಾರತದಲ್ಲಿನ ಎಲ್ಲರಿಗೂ ಸೇರಿದ್ದು ಮತ್ತು ಭಾರತೀಯರು ಭಾರತದ ಯಾವುದೇ ಪ್ರದೇಶದಲ್ಲಿ ಸಂಪಾದಿಸಿ ಜೀವನ ನಡೆಸಬಹುದು. ಇಲ್ಲಿ ಭಾಷೆ, ಜಾತಿ, ಉಪ ಜಾತಿ, ಸಮುದಾಯ, ಬುಡಕಟ್ಟುಗಳು ಭಿನ್ನವಿರಬಹುದು, ಆದರೆ ಎಲ್ಲರೂ ಭಾರತಾಂಬೆಯ ಮಕ್ಕಳು ಎಂದು ಆರೆಸ್ಸೆಸ್ ಮುಖಂಡ ಮೋಹನ್ ಭಾಗ್ವತ್ ಶಿವಸೇನೆಗೆ ವಿರುದ್ಧವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.