ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೆಲೆಯೇರಿಕೆಗೆ ಉತ್ಕೃಷ್ಟ ಜೀವನ ಶೈಲಿ ಕಾರಣ: ಪ್ರಧಾನಿ (Food security | India | Manmohan Singh | food production)
Bookmark and Share Feedback Print
 
ಆಹಾರ ವಸ್ತುಗಳ ಬೆಲೆಯೇರಿಕೆಗೆ ಉತ್ಕೃಷ್ಟ ಜೀವನ ಶೈಲಿಯೂ ಕಾರಣ; ಇದನ್ನು ನಿಯಂತ್ರಿಸುವಲ್ಲಿ ಆಡಳಿತ ಎಡವಿದೆ ಎಂದು ಒಪ್ಪಿಕೊಂಡಿರುವ ಪ್ರಧಾನಿ ಮನಮೋಹನ್ ಸಿಂಗ್, ಇದನ್ನು ಸರಿಪಡಿಸಿಕೊಳ್ಳುವ ಸಂಬಂಧ ರೂಪುರೇಷೆಗಳನ್ನು ರೂಪಿಸಲಾಗಿದೆ ಎಂದು ಹೇಳಿದ್ದಾರೆ.

ಮುಖ್ಯ ಕಾರ್ಯದರ್ಶಿಗಳ ಮೊದಲ ವಾರ್ಷಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಬೆಲೆಯೇರಿಕೆ ನಿಯಂತ್ರಣ ಮತ್ತು ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರಗಳಿಗೆ ಪ್ರೋತ್ಸಾಹ ಮತ್ತು ಸಹಕಾರವನ್ನು ತನ್ನಿಂದ ಸಾಧ್ಯವಾಗುವಷ್ಟು ಕೇಂದ್ರ ನೀಡಲು ಸಿದ್ಧವಿದೆ ಎಂದರು.

ಅಂತಾರಾಷ್ಟ್ರೀಯ ಬೇಡಿಕೆ ಮತ್ತು ಪೂರೈಕೆಯಲ್ಲಿನ ಒತ್ತಡಗಳಿಂದ ನಾವು ಪ್ರತ್ಯೇಕವಾಗಿ ಉಳಿಯಲು ಸಾಧ್ಯವಿಲ್ಲ. ಹಾಗಾಗಿ ಆಹಾರ ವಸ್ತುಗಳ ಪೂರೈಕೆಯಲ್ಲಿ ಎದುರಾಗುತ್ತಿರುವ ಕೊರತೆಯನ್ನು ಸರಿದೂಗಿಸಲು ಯತ್ನಿಸಿ. ಈ ಸಂಬಂಧ ಕೇಂದ್ರ ಸರಕಾರವು ಕೊರತೆಗಳನ್ನು ನೀಗಿಸಲು ಸಹಕಾರ ನೀಡಲು ಸಿದ್ಧವಿದೆ ಎಂದು ರಾಜ್ಯಗಳಿಗೆ ಪ್ರಧಾನ ಮಂತ್ರಿ ಹೇಳಿದ್ದಾರೆ.

ಸರಕಾರಿ ಮಟ್ಟದಲ್ಲಿ ನಡೆಯುವ ಯಾವುದೇ ರೀತಿಯ ಔದಾಸೀನ್ಯತೆ, ಮೈಗಳ್ಳತನ ಮತ್ತು ಭ್ರಷ್ಟಾಚಾರಗಳಿಗೆ ಜನತೆ ಈ ಹಿಂದೆ ಯಾವತ್ತೂ ಹೊಂದಿರದಷ್ಟು ಆಕ್ರೋಶವನ್ನು ಹೊಂದಿದ್ದಾರೆ. ಪ್ರಜೆಗಳ ಹೆಚ್ಚುತ್ತಿರುವ ನಿರೀಕ್ಷೆಗಳು ಕೂಡ ಅವರನ್ನು ತಾಳ್ಮೆರಹಿತರನ್ನಾಗಿ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.

ಸರಕಾರ ಈಗ ಹಿಂದೆಂದಿಗಿಂತಲೂ ಕಠಿಣ ಸವಾಲುಗಳನ್ನು ಎದುರಿಸುತ್ತಿದೆ. ಶಾಸಕಾಂಗ, ನ್ಯಾಯಾಂಗ ಮತ್ತು ಮಾಧ್ಯಮಗಳು ಸೇರಿದಂತೆ ಎಲ್ಲಾ ವಿಭಾಗಗಳಿಂದಲೂ ಹೊಣೆಗಾರಿಕೆಯ ಬಗ್ಗೆ ಸಾರ್ವಜನಿಕ ಕೂಗು ಕೇಳಿ ಬರುತ್ತಿದೆ ಎಂದರು.

ಕಳೆದೆರಡು ವರ್ಷಗಳಲ್ಲಿ ಸಿಕ್ಕಿರುವ ಅನುಭವಗಳು ಆಹಾರ ಭದ್ರತೆ ಮತ್ತು ಬೆಲೆಗಳನ್ನು ನಿಯಂತ್ರಿಸಲು ಉಪಯೋಗಕ್ಕೆ ಬಂದಿವೆ. ಕಳೆದ ಕೆಲವು ಸಮಯಗಳ ಹಿಂದೆ ದೇಶದಲ್ಲಿ ಆಹಾರ ವಸ್ತುಗಳ ದಾಸ್ತಾನು ಕೊರತೆಯೇ ಆತಂಕಕ್ಕೆ ಕಾರಣವಾಗಿತ್ತು. ಅದೇ ಹೊತ್ತಿಗೆ ನಮ್ಮಿಂದ ಬೆಲೆಯೇರಿಕೆಯನ್ನು ನಿಯಂತ್ರಿಸಲು ಸಾಧ್ಯ ಎಂಬುದನ್ನೂ ಮನಗಂಡೆವು ಎಂದು ಸಿಂಗ್ ವಿವರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ