ಮುಂಬೈ ಮರಾಠಿಗರಿಗೆ ಮಾತ್ರ ಎಂಬ ಶಿವಸೇನೆಯ ವಿವಾದಿತ ಘೋಷಣೆಯನ್ನು ತರಾಟೆಗೆ ತೆಗೆದುಕೊಂಡಿರುವ ಕೇಂದ್ರ ಗೃಹಸಚಿವ ಪಿ. ಚಿದಂಬರಂ, ಇಂತಹ ಮಾರಕ ಪ್ರತಿಪಾದನೆ ತಿರಸ್ಕರಿಸುವಂತಹದ್ದಾಗಿದೆ ಮತ್ತು ಆ ನಗರವು ಎಲ್ಲಾ ಭಾರತೀಯರಿಗೆ ಸೇರಿದ್ದು ಎಂದು ಸ್ಪಷ್ಟಪಡಿಸಿದ್ದಾರೆ.
ಶಿವಸೇನೆಯ ಪ್ರತಿಪಾದನೆಯನ್ನು ನಾವು ತಿರಸ್ಕರಿಸುತ್ತಿದ್ದೇವೆ. ಮುಂಬೈಯು ಎಲ್ಲಾ ಭಾರತೀಯರಿಗೆ ಸೇರಿದ್ದು ಮತ್ತು ಮುಂಬೈಯಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಎಲ್ಲಾ ಭಾರತೀಯರಿಗೂ ಹಕ್ಕಿದೆ ಎಂದು ಚಿದಂಬರಂ ಹೇಳಿದ್ದಾರೆ.
ಶಿವಸೇನೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ ಮಂಡಿಸುತ್ತಿರುವ ವಾದವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ಮಾರಕ ಪ್ರತಿಪಾದನೆಯಾಗಿದ್ದು, ನಾವು ತಿರಸ್ಕರಿಸುತ್ತೇವೆ ಎಂದರು.
ಮುಂಬೈ ಎಲ್ಲಾ ಭಾರತೀಯರಿಗೆ ಸೇರಿದ್ದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೇಳಿದ್ದಕ್ಕೆ ಶಿವಸೇನೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ ಮುಂಬೈಯಲ್ಲಿನ ಪರಿಸ್ಥಿತಿಯನ್ನು ನಿಭಾಯಿಸಲು ಮಹಾರಾಷ್ಟ್ರ ಸರಕಾರ ಸಮರ್ಥವಾಗಿದೆ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.
ಮಹಾರಾಷ್ಟ್ರ ಸರಕಾರವು ನಮ್ಮಿಂದ ಸಲಹೆಯನ್ನೇನಾದರೂ ಬಯಸಿದಲ್ಲಿ, ನಾವು ಸಿದ್ಧರಿದ್ದೇವೆ. ಆದರೆ ಅವರು ಪರಿಸ್ಥಿತಿಯನ್ನು ನಿಭಾಯಿಸಲು ಸಮರ್ಥರಿದ್ದಾರೆ ಎಂಬ ಭರವಸೆ ನನ್ನದು ಎಂದು ಚಿದಂಬರಂ ಅಭಿಪ್ರಾಯಪಟ್ಟರು.
ಶಿವಸೇನೆ, ಎಂಎನ್‌ಎಸ್‌ಗೆ ಎಚ್ಚರಿಕೆ... ಈ ನಡುವೆ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌಹಾನ್ ಅಸಂಬದ್ಧವಾಗಿ ವರ್ತಿಸುತ್ತಿರುವ ಶಿವಸೇನೆ ಮತ್ತು ಎಂಎನ್ಎಸ್‌ಗಳಿಗೆ ಎಚ್ಚರಿಕೆ ನೀಡಿದ್ದಾರೆ.
ನಾವು ಸುಮ್ಮನೆ ಕೂರುವುದಿಲ್ಲ. ನಾವು ಕಠಿಣ ಕ್ರಮಗಳನ್ನು ಕೈಗೊಳ್ಳಲಿದ್ದೇವೆ. ಈ ಎರಡೂ ಪಕ್ಷಗಳು ರಾಜಕೀಯ ಉದ್ದೇಶಗಳಿಗಾಗಿ ಇದನ್ನು ಮಾಡುತ್ತಿವೆ. ಉತ್ತರ ಭಾರತೀಯರ ಮೇಲಿನ ದಾಳಿಗಳನ್ನು ಸಹಿಸಲು ಸಾಧ್ಯವಿಲ್ಲ. ಮುಂಬೈಯಲ್ಲಿ ಯಾವ ಭಾರತೀಯರೂ ವಾಸಿಸಬಹುದು. ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.