ಪಾಕಿಸ್ತಾನಿ ಆಟಗಾರರನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸೇರಿಸಿಕೊಳ್ಳಬೇಕಿತ್ತು ಎಂದು ಹೇಳಿದ್ದಕ್ಕೆ ಕ್ಷಮೆ ಕೇಳುವ ಅಗತ್ಯವಿಲ್ಲ ಎಂದು ಹೇಳಿರುವ ಬಾಲಿವುಡ್ ನಟ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಮಾಲಕ ಶಾರೂಖ್ ಖಾನ್, ತನ್ನ ವಾದವನ್ನು ವಿರೋಧಿಸುತ್ತಿರುವ ಶಿವಸೇನೆ ಮತ್ತಿತರ ಪಕ್ಷಗಳದ್ದು ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ ಎಂದು ಬಣ್ಣಿಸಿದ್ದಾರೆ.
ತನ್ನ ಈ ಹಿಂದಿನ ಹೇಳಿಕೆಗಳನ್ನು ಸಮರ್ಥಿಸಿಕೊಂಡಿರುವ ಶಾರೂಖ್, 'ಭಾರತವು ಅತ್ಯುತ್ತಮ ದೇಶ ಮತ್ತು ಅತಿಥಿಯಾಗಿ ಪ್ರತಿಯೊಬ್ಬರಿಗೂ ಸ್ವಾಗತವಿದೆ ಎಂಬುದನ್ನು ಭಾರತೀಯರೆಲ್ಲರೂ ಒಪ್ಪಿಕೊಳ್ಳುತ್ತಾರೆಂಬ ವಿಶ್ವಾಸ ನನಗಿದೆ' ಎಂದರು.
ಇದನ್ನು ವಿರೋಧಿಸುತ್ತಿರುವ ಶಕ್ತಿಗಳು ಅನಾರೋಗ್ಯಕರವಾದದ್ದು, ಪ್ರಜಾಪ್ರಭುತ್ವ ವಿರೋಧಿ ಮತ್ತು ಸಂವೇದನಾರಹಿತವಾದದ್ದು ಎಂದು ನನ್ನ ಅನಿಸಿಕೆ. ನಾವು ಮಾತ್ರ ವ್ಯಕ್ತಪಡಿಸಲು ಸಾಧ್ಯವಿರುವ ವಿಚಾರಗಳ ಮೇಲೆ ವಿಶ್ವಾಸವಿಟ್ಟು ಮಾತನಾಡಿರುವುದಕ್ಕೆ ಬದ್ಧರಾಗಿರಬೇಕಾಗುತ್ತದೆ, ನಾನು ಅದಕ್ಕೆ ಹೊರತಲ್ಲ, ಆ ಸಾಮರ್ಥ್ಯವೂ ನನಗಿದೆ ಎಂದು ಶಿವಸೇನೆ ತನ್ನ ಮನೆಯ ಮುಂದೆ ಪ್ರತಿಭಟನೆ ನಡೆಸಿರುವ ಕುರಿತಾದ ಪ್ರಶ್ನೆಗಳಿಗೆ ಶಾರೂಖ್ ಉತ್ತರಿಸಿದರು.
ಓರ್ವ ಭಾರತೀಯನಾಗಿ ನಾನು ಹೇಳಿರುವುದು ಮುಖಭಂಗಕ್ಕೀಡಾಗಿಲ್ಲ, ಅಪರಾಧಿಯೆನಿಸಿಲ್ಲ ಅಥವಾ ಅಸಮಾಧಾನ ತಂದಿಲ್ಲದಿರುವುದರಿಂದ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಐಪಿಎಲ್‌ನಲ್ಲಿ ಪಾಕಿಸ್ತಾನಿ ಆಟಗಾರರನ್ನು ನಿರ್ಲಕ್ಷಿಸಿರುವುದಕ್ಕೆ ಶಾರೂಖ್ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ತನ್ನ ತಂಡದಲ್ಲೇನಾದರೂ ಖಾಲಿ ಜಾಗ ಇರುತ್ತಿದ್ದರೆ ಗಡಿಯಾಚೆಗಿನ ಆಟಗಾರರನ್ನು ನಾನು ಖರೀದಿಸುತ್ತಿದ್ದೆ ಎಂದು ಪಾಕ್ ಆಟಗಾರರಿಗೆ ಬೆಂಬಲ ಸೂಚಿಸಿದ್ದರು.
ಇದು ಶಿವಸೇನೆ ಮತ್ತಿತರ ಕೆಲವು ಪಕ್ಷಗಳಿಗೆ ತೀವ್ರ ಅಸಮಾಧಾನ ತಂದಿತ್ತು. ಶಾರೂಖ್ ಅವರ ರಾಷ್ಟ್ರಪ್ರೇಮವನ್ನೇ ಪ್ರಶ್ನಿಸಿದ್ದ ಶಿವಸೇನೆ, ಅವರ ಪ್ರತಿಕೃತಿಗಳನ್ನು ದಹಿಸಿದ್ದಲ್ಲದೆ ಮುಂಬರುವ ಅವರ ಚಿತ್ರ 'ಮೈ ನೇಮ್ ಈಸ್ ಖಾನ್' ಬಿಡುಗಡೆ ಅವಕಾಶ ನೀಡುವುದಿಲ್ಲ ಎಂದು ಅವರ ಮುಂಬೈಯಲ್ಲಿನ ಮನೆ ಮುಂದೆ ಭಾರೀ ಪ್ರತಿಭಟನೆ ನಡೆಸಿತ್ತು.
ಶಾರೂಖ್ ಪಾಕಿಸ್ತಾನಿ ಆಟಗಾರರ ಪರವಹಿಸಿ ಮಾತನಾಡುವುದಾದರೆ ಪಾಕಿಸ್ತಾನಕ್ಕೇ ಹೋಗಲಿ ಎಂದು ಘೋಷಣೆ ಕೂಗುತ್ತಿದ್ದ ಶಿವಸೈನಿಕರು, ಮುಂಬೈಯಿಂದ ಪಾಕಿಸ್ತಾನಕ್ಕೆ ಪ್ರಯಾಣಿಸುವ ಟಿಕೆಟನ್ನು ಪ್ರದರ್ಶಿಸಿತ್ತು. ಕ್ಷಮೆ ಯಾಚಿಸದ ಹೊರತು ಖಾನ್ ವಿರುದ್ಧದ ಪ್ರತಿಭಟನೆಯನ್ನು ತಾವು ನಿಲ್ಲಿಸುವುದಿಲ್ಲ ಎಂದು ಬೆದರಿಕೆಯನ್ನೂ ಪಕ್ಷ ಹಾಕಿದೆ.