ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಧಾನಿ, ಸೋನಿಯಾ ಬಳಿ ಸುಳಿದ ಮಹಿಳೆ, ಕೆಲಕಾಲ ಆತಂಕ
(Jharkhand | Prime Minister Manmohan Singh | Sonia Gandhi | Fatima Khatoon)
ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಮಹಿಳೆಯೊಬ್ಬರು ಭದ್ರತಾ ವಲಯವನ್ನು ಭೇದಿಸಿ ಇದ್ದಕ್ಕಿದ್ದಂತೆ ವೇದಿಕೆಯತ್ತ ಧಾವಿಸಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಬಳಿ ತೆರಳಿ ಕೆಲ ಕ್ಷಣಗಳ ಕಾಲ ಆತಂಕ ಹುಟ್ಟಿಸಿದ ಪ್ರಸಂಗವೊಂದು ವರದಿಯಾಗಿದೆ.
ಜಾರ್ಖಂಡ್ನ ಗ್ರಾಮವೊಂದರಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪ್ರಶಸ್ತಿ ಪ್ರದಾನ ಸಮಾರಂಭ ಇಲ್ಲಿನ ವಿಜ್ಞಾನ ಭವನದಲ್ಲಿ ನಡೆಯುತ್ತಿತ್ತು. ಆ ಹೊತ್ತಿನಲ್ಲಿ ವಿಶೇಷ ಭದ್ರತಾ ಪಡೆ ಮತ್ತು ಇತರ ರಕ್ಷಣಾ ಸಿಬ್ಬಂದಿಗಳ ಕಣ್ತಪ್ಪಿಸಿ ಫಾತಿಮಾ ಖತೂನ್ ಎಂಬಾಕೆ ವೇದಿಕೆಯೇರಿ ಕೆಲ ಕಾಲ ಗೊಂದಲವನ್ನುಂಟು ಮಾಡಿದ್ದರು.
ನಂತರ ತಿಳಿದು ಬಂದದ್ದೇನೆಂದರೆ ಆಕೆ ತನ್ನ ಹೆಸರನ್ನು ನಿರೂಪಕರು ಪ್ರಶಸ್ತಿಗಾಗಿ ಕರೆದು ಹೇಳಿದ್ದಾರೆಂದು ತಪ್ಪಾಗಿ ಅರ್ಥೈಸಿಕೊಂಡು ವೇದಿಕೆ ಏರಿದ್ದರೆಂಬುದು.
ವೇದಿಕೆಯೇರಿದ್ದ ಫಾತಿಮಾರವರು ಸೋನಿಯಾ ಪಕ್ಕವೇ ನಿಂತು ಹಲವರಲ್ಲಿ ಅಚ್ಚರಿ ಮೂಡಿಸಿದ್ದರು. ಈ ಹೊತ್ತಿನಲ್ಲಿ ಮಹಿಳೆಯ ಭುಜ ತಡವಿದ ಸೋನಿಯಾ ಆಕೆಯ ಕಿವಿಯಲ್ಲಿ ಏನೋ ಉಸುರಿದರು.
ನಂತರ ಫಾತಿಮಾರನ್ನು ಭದ್ರತಾ ಸಿಬ್ಬಂದಿಗಳು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ. ತಾನು ಗೊಂದಲದಿಂದಾಗಿಯೇ ವೇದಿಕೆ ಹತ್ತಿದ್ದೇನೆ ಎಂಬುದನ್ನು ಈ ಸಂದರ್ಭದಲ್ಲಿ ಆಕೆ ತಿಳಿಸಿದ್ದಾರೆಂದು ಭದ್ರತಾ ಪಡೆಗಳು ತಿಳಿಸಿವೆ.
ಪ್ರಶಸ್ತಿ ಸ್ವೀಕರಿಸಲು ನನ್ನ ಹೆಸರನ್ನೂ ನಿರೂಪಕರು ಕರೆದರು ಎಂದು ಅಂದುಕೊಂಡು ನಾನು ಹೋಗಿದ್ದೆ. ಬೇರೇನೂ ಉದ್ದೇಶವಿರಲಿಲ್ಲ ಎಂದು ಹಳ್ಳಿಯ ಈ ಮಹಿಳೆ ವಿವರಣೆ ನೀಡಿದ್ದಾರೆ.