ಕಿಸೆಗಳ್ಳರನ್ನು ಭಯೋತ್ಪಾದಕರಂತೆ ನಡೆಸಿಕೊಳ್ಳುವ ಪೊಲೀಸರು ನಿಜವಾದ ಭಯೋತ್ಪಾದಕರನ್ನು ಮನೆಗೆ ಬಂದ ಅಪರೂಪದ ಅತಿಥಿಗಳಂತೆ ಉಪಚರಿಸುತ್ತಿರುವ ವೀಡಿಯೋ ಬಹಿರಂಗವಾಗಿದ್ದು, ರಾಷ್ಟ್ರದ ಸುರಕ್ಷತೆಯ ಬಗ್ಗೆ ಆಗಾಗ ಮೂಡುತ್ತಿರುವ ಆತಂಕಗಳಿಗೆ ಮತ್ತೊಂದು ಪ್ರಸಂಗ ಸೇರ್ಪಡೆಯಾಗಿದೆ.
ಖಾಸಗಿ ಟೀವಿ ಚಾನೆಲ್ 'ಟೈಮ್ಸ್ ನೌ' ನಡೆಸಿದ ಕಾರ್ಯಾಚರಣೆಯಲ್ಲಿ ಇದು ಬಹಿರಂಗವಾಗಿದೆ. ಹತ್ತಾರು ಭಯೋತ್ಪಾದಕರಿಗೆ ಜೈಲಿನ ಹೊರಗಡೆ ತಿಂಡಿ-ತೀರ್ಥ ಕೊಡಿಸುತ್ತಿರುವುದು, ಮೊಬೈಲ್ ಮಾತುಕತೆ ನಡೆಸಲು ಅವಕಾಶ ನೀಡುತ್ತಿರುವುದನ್ನು ಬಯಲಿಗೆಳೆಯಲಾಗಿದೆ.
ಘಟನೆ ವಿವರ... ಜಮ್ಮುವಿನ ಕಿಶ್ತಾವರ್ ಜಿಲ್ಲೆಯಲ್ಲಿನ ನ್ಯಾಯಾಲಯವೊಂದಕ್ಕೆ ಕುಖ್ಯಾತ ಭಯೋತ್ಪಾದಕರನ್ನು ಕರೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಅವರಿಗೆ ಈ ರೀತಿಯ ರಾಜೋಪಚಾರ ನೀಡಲಾಗಿದೆ.
ಲಷ್ಕರ್ ಇ ತೋಯ್ಬಾ, ಹಿಜ್‌ಬುಲ್ ಮುಜಾಹಿದೀನ್ ಮತ್ತು ಹರ್ಕತ್ ಉಲ್ ಜೆಹಾದ್ ಭಯೋತ್ಪಾದಕ ಸಂಘಟನೆಗಳಿಗೆ ಸೇರಿದ 18 ಉಗ್ರರ ಪೈಕಿ 16 ಮಂದಿ ಕ್ಯಾಮರಾ ಕಣ್ಣಲ್ಲಿ ಸೆರೆ ಸಿಕ್ಕಿದ್ದು, ಒಂದು ಕೈಯಲ್ಲಿ ಕೋಳ ಹಾಕಿಕೊಂಡು ಪಕ್ಕದಲ್ಲೇ ಪೊಲೀಸರು ನಿಂತುಕೊಂಡಿರುವುದು ಕೂಡ ಸ್ಪಷ್ಟವಾಗಿ ಕಂಡು ಬಂದಿದೆ.
ವಿಚಾರಣಾಧೀನ ಕೈದಿಗಳಿಗೆ ಜೈಲಿನ ಹೊರಗಡೆ ಆಹಾರ ಒದಗಿಸುವುದು ಮತ್ತು ಸಾರ್ವಜನಿಕ ಸ್ಥಳಗಳಿಗೆ ಕರೆದೊಯ್ಯಲು ಅವಕಾಶ ಇಲ್ಲದೇ ಇದ್ದರೂ ಪೊಲೀಸರ ಕೃಪೆಯಿಂದ ಭಯೋತ್ಪಾದಕರು ರೆಸ್ಟಾರೆಂಟ್ ಒಂದರಲ್ಲಿ ಭರ್ಜರಿಯಾಗಿ ಆಹಾರ ಸೇವಿಸುತ್ತಿರುವುದು ಮತ್ತು ಮೊಬೈಲುಗಳಲ್ಲಿ ಆರಾಮವಾಗಿ ಮಾತುಕತೆ ನಡೆಸುತ್ತಿರುವುದು ಕಂಡು ಬಂದಿತ್ತು.
ಹುಜಿ ಸಂಘಟನೆಯ ಮಾಜಿ ಕಮಾಂಡರ್ ಶೇರ್ ಖಾನ್ ಎಂಬವನು ಮೊಬೈಲ್‌ನಲ್ಲಿ ಮಾತನಾಡುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದ್ದು, ಈತ ಕಳೆದ ವರ್ಷ ಪೊಲೀಸರಿಗೆ ಶರಣಾಗಿದ್ದ ಎಂದು ಮೂಲಗಳು ಹೇಳಿವೆ.
ನಾಲ್ವರು ಪೊಲೀಸರ ಅಮಾನತು... ಈ ಘಟನೆ ಬಯಲಿಗೆ ಬರುತ್ತಿದ್ದಂತೆ ಎಚ್ಚರಗೊಂಡ ಜಮ್ಮು-ಕಾಶ್ಮೀರ ಸರಕಾರ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ, ತನಿಖೆಗೆ ಆದೇಶ ನೀಡಿದೆ.
ಸಹಾಯಕ ಸಬ್ ಇನ್ಸ್‌ಪೆಕ್ಟರ್ ತಿಲಕ್ ರಾಜ್, ಹೆಡ್ ಕಾನ್ಸ್‌ಟೇಬಲ್ ಸುಭಾಷ್ ಚಂದೇರ್ ಮತ್ತು ಇತರ ಇಬ್ಬರು ಕಾನ್ಸ್‌ಟೇಬಲ್‌ಗಳಾದ ಮೊಹಮ್ಮದ್ ರಫೀಕ್ ಮತ್ತು ಜಿಲಾ ಲಾಲ್ ಎಂಬವರೇ ಅಮಾನತು ಶಿಕ್ಷೆಗೊಳಗಾದವರು.