ಮದುವೆಗಿಂತ ಮೊದಲು ಹುಡುಗಿಯ ಜತೆ ನಡೆಸುವ ದೈಹಿಕ ಸಂಪರ್ಕವನ್ನು ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ ಎಂದು ದೆಹಲಿ ಉಚ್ಚ ನ್ಯಾಯಾಲಯ ಪ್ರಕರಣವೊಂದನ್ನು ಉಲ್ಲೇಖಿಸಿ ಹೇಳಿದೆ.
ನಿಶ್ಚಿತಾರ್ಥ ಮಾಡಿಕೊಂಡ ನಂತರ ಯುವತಿಯೊಬ್ಬಳೊಂದಿಗೆ ನಿರಂತರ ದೈಹಿಕ ಸಂಪರ್ಕ ಇಟ್ಟುಕೊಂಡಿದ್ದ ಯುವಕನೋರ್ವ ನಂತರ ಮದುವೆಗೆ ನಿರಾಕರಿಸಿದ್ದ. ಈ ಹಿನ್ನೆಲೆಯಲ್ಲಿ ಬಂಧನ ಭೀತಿಯೆದುರಿಸುತ್ತಿದ್ದ ಆತ ನ್ಯಾಯಾಲಯದ ಮೊರೆ ಹೊಕ್ಕು, ನಿರೀಕ್ಷಣಾ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದ.
WD
ಇದನ್ನು ವಿಚಾರಣೆಗೆ ತೆಗೆದುಕೊಂಡ ನ್ಯಾಯಾಲಯ, ಆತ ಅರ್ಜಿಯನ್ನು ತಳ್ಳಿ ಹಾಕಿದ್ದಲ್ಲದೆ ನಡೆದಿರುವುದು ಅತ್ಯಾಚಾರ ಎಂದಿದೆ. ತಪ್ಪಿಸಿಕೊಂಡಿರುವ ಆತನನ್ನು ಶೀಘ್ರ ಬಂಧಿಸುವಂತೆ ಪೊಲೀಸರಿಗೆ ಆದೇಶ ನೀಡಿದೆ.
ಘಟನೆ ವಿವರ... ನಿಖಿಲ್ ಪ್ರಸಾರ್ ಎಂಬಾತನ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಯೋರ್ವಳು ಕೆಲ ದಿನಗಳ ಕಾಲ ಮುಂಬೈಯಲ್ಲಿ ಆತನೊಂದಿಗೆ ವಾಸಿಸುತ್ತಿದ್ದಳು. ಬಳಿಕ ಅವರು ದೆಹಲಿಯ ಹೊಟೇಲೊಂದರಲ್ಲೂ ಹಲವು ದಿನಗಳ ಕಾಲ ಉಳಿದುಕೊಂಡಿದ್ದ ಸಂದರ್ಭದಲ್ಲಿ ದೈಹಿಕ ಸಂಪರ್ಕ ಮಾಡಿದ್ದರು.
ಆದರೆ ಮದುವೆ ದಿನಾಂಕ ನಿಗದಿಪಡಿಸುವ ವಿಚಾರಕ್ಕೆ ಬಂದಾಗ ಜಾತಿಯನ್ನು ಮುಂದಿಟ್ಟಿದ್ದ ನಿಖಿಲ್, ಮದುವೆ ಸಾಧ್ಯವಿಲ್ಲ ಎಂದು ಸಾರಾಸಗಟಾಗಿ ಯುವತಿಯನ್ನು ಬೀದಿಗೆ ತಳ್ಳಿದ್ದ. ಇವರ ನಡುವೆ ಅಧಿಕೃತ ನಿಶ್ಚಿತಾರ್ಥ ನಡೆದಿರಲಿಲ್ಲ ಎಂದೂ ವರದಿಗಳು ಹೇಳಿವೆ.
ನ್ಯಾಯಾಲಯ ಆಕ್ರೋಶ... ಯುವತಿಯೋರ್ವಳ ವ್ಯಕ್ತಿತ್ವ, ಮನೋಧರ್ಮ, ವಿದ್ಯಾಭ್ಯಾಸ, ಸಂಸ್ಕೃತಿ, ಪೋಷಣೆ ಮತ್ತು ಕೌಟುಂಬಿಕ ಹಿನ್ನೆಲೆ ಏನೇ ಇದ್ದರೂ ಕೇವಲ ಆಕೆ ತನ್ನ ಜಾತಿ ಅಥವಾ ಉಪಜಾತಿ ಎಂಬುದು ತಿಳಿದಲ್ಲಿ ಆತ ಮದುವೆಯಾಗಲು ಸಿದ್ಧನಿದ್ದಾನೆಯೇ ಎಂದು ಪ್ರಶ್ನಿಸಿದ ನ್ಯಾಯಾಲಯ, ಖಂಡಿತಾ ಆತನ ಉತ್ತರ ಋಣಾತ್ಮಕವಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿತು.
ಅಂದರೆ ಇದರ ಅರ್ಥ ಆತ ಯುವತಿಯನ್ನು ಮದುವೆಯಾಗುವ ಇಚ್ಛೆ ಹೊಂದಿರಲಿಲ್ಲ. ಹಾಗಾಗಿ ಆಕೆಯ ಜತೆಗಿನ ಸಾಂಪ್ರದಾಯಿಕ ನಿಶ್ಚಿತಾರ್ಥದವರೆಗೂ ಸೆಕ್ಸ್‌ಗಾಗಿ ಕಾಯುವ ಅಗತ್ಯ ಆತನಿಗೆ ಕಂಡು ಬಂದಿರಲಿಲ್ಲ ಎಂದು ನ್ಯಾಯಾಧೀಶರು ಪ್ರಕರಣವನ್ನು ವಿಶ್ಲೇಷಿಸಿದರು.
ಇದೀಗ ಸಂಪ್ರದಾಯ ಮತ್ತು ಮಡಿವಂತಿಕೆಯನ್ನು ಮುಂದಿಟ್ಟು ಆತ ಮದುವೆಯಾಗಲು ನಿರಾಕರಿಸುತ್ತಿದ್ದಾನೆ. ಮದುವೆಗಿಂತ ಮೊದಲು ಲೈಂಗಿಕ ಚಟುವಟಿಕೆ ನಡೆಸುವಾಗ ಆತನಿಗೆ ಜಾತಿಯ ಪ್ರಶ್ನೆ ಏಕೆ ಅಡ್ಡ ಬರಲಿಲ್ಲ ಎಂದು ಆತನ ಪರ ವಕೀಲರನ್ನು ಕೋರ್ಟ್ ಪ್ರಶ್ನಿಸಿತು.
ಮದುವೆಗಿಂತ ಮೊದಲು ನಡೆಸುವ ದೈಹಿಕ ಸಂಪರ್ಕ ಅತ್ಯಾಚಾರ ಎನಿಸಿಕೊಳ್ಳುತ್ತದೆ ಅಥವಾ ಆಕೆಗೆ ಮೋಸ ಮಾಡಲಾಗಿದೆ ಅಥವಾ ಅಮಾಯಕ ಹುಡುಗಿಯರನ್ನು ಶೋಷಣೆ ಮಾಡಲಾಗಿದೆ ಎಂದು ಅರ್ಥೈಸಲಾಗುತ್ತದೆ ಎಂದು ನ್ಯಾಯಾಧೀಶರು ಈ ಸಂದರ್ಭದಲ್ಲಿ ತಿಳಿಸಿದರು.