ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜೀವ್ ಹಂತಕಿ ಬಿಡುಗಡೆ; ಏಕಪಕ್ಷೀಯ ನಿರ್ಧಾರವಿಲ್ಲ: ಕರುಣಾ (Tamil Nadu | Nalini | Rajiv Gandhi assassination case | M Karunanidhi)
Bookmark and Share Feedback Print
 
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ, ತನ್ನನ್ನು ಅವಧಿಗಿಂತ ಮುಂಚೆ ಬಿಡುಗಡೆ ಮಾಡಬೇಕೆಂಬ ಮನವಿ ಸಲ್ಲಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ, ಯಾವುದೇ ಏಕಪಕ್ಷೀಯ ನಿರ್ಧಾರಕ್ಕೆ ಬರುವುದಿಲ್ಲ ಎಂದು ತಿಳಿಸಿದ್ದಾರೆ.

ಇದು ಮಹತ್ವದ ವಿಚಾರವಾದ ಕಾರಣ ರಾಷ್ಟ್ರೀಯ ಮಟ್ಟದಲ್ಲಿ ಸಮಾಲೋಚನೆ ನಡೆಸಲಾಗುತ್ತದೆ. ಹಾಗಾಗಿ ನಾವು ಯಾವುದೇ ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅವಧಿಗೂ ಮುಂಚೆ ಬಿಡುಗಡೆ ಮಾಡಬೇಕೆಂಬ ನಳಿನಿಯ ಮನವಿಯನ್ನು ಪರಿಗಣಿಸುವ ಸಂಬಂಧ ರಾಜ್ಯ ಸರಕಾರವು ಸಲಹಾ ಸಮಿತಿಯೊಂದನ್ನು ನೇಮಿಸಿದ್ದು, ಅದರ ವರದಿ ಹಾದಿಯಲ್ಲಿದೆ ಎಂದು ಕರುಣಾನಿಧಿ ತಿಳಿಸಿದ್ದಾರೆ.

ನಳಿನಿ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಸ್ವೀಕರಿಸಿದ್ದ ಮದ್ರಾಸ್ ಹೈಕೋರ್ಟ್ 2008ರ ಸೆಪ್ಟೆಂಬರ್ 24ರಂದು ಸಮಿತಿ ರಚನೆಗೆ ಸರಕಾರಕ್ಕೆ ನಿರ್ದೇಶನ ನೀಡಿತ್ತು.

ಕಳೆದ 19 ವರ್ಷಗಳಿಂದ ಸೆರೆಮನೆಯಲ್ಲಿರುವ ನಳಿನಿಯ ಜತೆ ಇತರ ಇಬ್ಬರು ದೋಷಿಗಳಾದ ಜಯಕುಮಾರ್ ಮತ್ತು ರಾಬರ್ಟ್ ಪಯಾಸ್ ಕೂಡ ತಮ್ಮನ್ನು ಅವಧಿಗಿಂತ ಮೊದಲು ಬಿಡುಗಡೆ ಮಾಡಬೇಕೆಂದು ಮನವಿ ಸಲ್ಲಿಸಿದ್ದು, ಅದನ್ನು ಕೂಡ ಮಂಡಳಿ ಗಣನೆಗೆ ತೆಗೆದುಕೊಳ್ಳಲಿದೆ.

1991ರ ಜೂನ್ 14ರಂದು ಬಂಧನಕ್ಕೊಳಗಾಗಿದ್ದ ನಳಿನಿಗೆ ಇಲ್ಲಿನ ವಿಶೇಷ ನ್ಯಾಯಾಲಯವು ಇತರ 25 ಮಂದಿ ಜತೆಗೆ 1998ರ ಜನವರಿಯಲ್ಲಿ ಮರಣದಂಡನೆ ವಿಧಿಸಿತ್ತು. ಬಳಿಕ 1999ರ ಮೇ ತಿಂಗಳಲ್ಲಿ ನಳಿನಿ ಮತ್ತು ಇತರ ಮೂವರಿಗೆ ಮಾತ್ರ ಮರಣದಂಡನೆಯನ್ನು ಖಾಯಂಗೊಳಿಸಿ ಆದೇಶ ನೀಡಿತ್ತು.

ಆದರೆ 2000 ಇಸವಿಯ ಏಪ್ರಿಲ್ 24ರಂದು ರಾಜ್ಯ ಸರಕಾರವು ಆಕೆಯ ಶಿಕ್ಷೆಯನ್ನು ಜೀವಾವಧಿಗೆ ಸೀಮಿತಗೊಳಿಸಿತ್ತು. ಆದರೆ 2007ರಲ್ಲಿ ತನ್ನನ್ನು ಅವಧಿಗೆ ಮುಂಚೆ ಬಿಡುಗಡೆ ಮಾಡಬೇಕು ಎಂದು ಆಕೆ ಸಲ್ಲಿಸಿದ್ದ ಅರ್ಜಿಯನ್ನು ಸರಕಾರ ತಳ್ಳಿ ಹಾಕಿತ್ತು.

ಬಳಿಕ ಆಕೆ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದಳು. ಮೂಲಗಳ ಪ್ರಕಾರ ಸಲಹಾ ಸಮಿತಿಯು ನಳಿನಿಯ ಸನ್ನಡತೆಯನ್ನು ಗಮನಿಸಿ, ಬಿಡುಗಡೆಗೆ ಶಿಫಾರಸು ಮಾಡಲಿದೆ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ