ಪ್ರತೀ ವರ್ಷ ಸುಮಾರು 80 ಲಕ್ಷ ಭಕ್ತರನ್ನು ಬರ ಮಾಡಿಕೊಳ್ಳುತ್ತಿರುವ ಅಪರೂಪದ ಹಿಂದೂ ಧಾರ್ಮಿಕ ಕ್ಷೇತ್ರ ಜಮ್ಮುವಿನ ವೈಷ್ಣೋದೇವಿ ಗುಹಾಲಯಕ್ಕೆ ಭಯೋತ್ಪಾದಕರಿಂದ ಮತ್ತೆ ಬೆದರಿಕೆಗಳು ಬಂದಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ.
ಈ ಗುಹಾ ದೇವಾಲಯಕ್ಕೆ ಭಯೋತ್ಪಾದಕರಿಂದ ಬೆದರಿಕೆಗಳಿವೆ ಮತ್ತು ಅವರ ಪಟ್ಟಿಯಲ್ಲಿರುವ ಪ್ರಮುಖ ಹೆಸರಿನಲ್ಲಿ ಇದೂ ಒಂದು ಎಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ವಿಶೇಷ ಮಹಾ ನಿರ್ದೇಶಕ ಎನ್.ಕೆ. ತ್ರಿಪಾಠಿ ಎಚ್ಚರಿಸಿದ್ದಾರೆ.
ಭಯೋತ್ಪಾದಕರಿಂದ ವೈಷ್ಣೋದೇವಿ ದೇವಸ್ಥಾನಕ್ಕೆ ಬೆದರಿಕೆಗಳಿವೆ. ಇಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಯೋಜನೆಗಳನ್ನು ಉಗ್ರರು ರೂಪಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಗಳನ್ನು ನಾವು ಪಡೆದಿದ್ದೇವೆ ಎಂದು ಪತ್ರಕರ್ತರೊಂದಿಗೆ ಮಾತನಾಡುತ್ತಾ ಅವರು ತಿಳಿಸಿದ್ದಾರೆ.
ಸಿಆರ್‌ಪಿಎಫ್ ಸಿಬ್ಬಂದಿಗಳು ಇಲ್ಲಿ ಕಟ್ಟೆಚ್ಚರ ವಹಿಸುತ್ತಿದ್ದು, ಪ್ರಜಾಪ್ರಭುತ್ವ ದಿನದಿಂದಲೇ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನಾವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ತ್ರಿಪಾಠಿ ವಿವರಣೆ ನೀಡಿದ್ದಾರೆ.
ಈ ದೇವಸ್ಥಾನಕ್ಕೆ ಸಂಪೂರ್ಣ ಭದ್ರತೆಯನ್ನು ನೀಡುವ ಜವಾಬ್ದಾರಿ ಸಿಆರ್‌ಪಿಎಫ್‌ನ ಒಂದು ಬೆಟಾಲಿಯನ್‌ಗೆ ವಹಿಸಲಾಗಿದೆ. ಈ ಬೆಟಾಲಿಯನ್‌ನಲ್ಲಿ ಕನಿಷ್ಠ 1,000 ಸಿಬ್ಬಂದಿಗಳಿರುತ್ತಾರೆ.
ಪ್ರತೀ ಬಾರಿಯೂ ಬೆದರಿಕೆಗಳು ಭಿನ್ನ ರೀತಿಯಲ್ಲಿ ಬರುತ್ತಿರುವುದನ್ನು ನಾವು ಗಮನಿಸಿದ್ದೇವೆ. ಈ ಸಂಬಂಧ ನಾನು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದ್ದೇನೆ. ಅಗತ್ಯ ಕ್ರಮಗಳನ್ನು ಕೂಡ ಸೂಚಿಸಿದ್ದೇನೆ. ಆಯಕಟ್ಟಿನ ಜಾಗಗಳಲ್ಲಿ ಹೆಚ್ಚಿನ ತಪಾಸಣೆಗಳನ್ನು ನಡೆಸುವಂತೆ ಆದೇಶ ನೀಡಲಾಗಿದೆ ಎಂದು ಅವರು ತಿಳಿಸಿದರು.