ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ದಾವೂದ್ ಬಾವನನ್ನು ಹೊಗಳಿದ್ದ ಠಾಕ್ರೆಗೆ ಈಗ ನೈತಿಕತೆಯೇ ಇಲ್ಲ' (anti-Mumbai virus | Shiv Sena | Bal Thackeray | Javed Miandad)
'ದಾವೂದ್ ಬಾವನನ್ನು ಹೊಗಳಿದ್ದ ಠಾಕ್ರೆಗೆ ಈಗ ನೈತಿಕತೆಯೇ ಇಲ್ಲ'
ಮುಂಬೈ, ಗುರುವಾರ, 4 ಫೆಬ್ರವರಿ 2010( 10:46 IST )
ಐದು ವರ್ಷಗಳ ಹಿಂದೆ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಬಾವ, ಪಾಕಿಸ್ತಾನಿ ಕ್ರಿಕೆಟ್ ಆಟಗಾರ ಜಾವೇದ್ ಮಿಯಾಂದಾದ್‌ರನ್ನು ಮನೆಗೆ ಕರೆಸಿ ಅಪಾದಮಸ್ತಕ ಹೊಗಳಿದ್ದ ಶಿವಸೇನೆ ವರಿಷ್ಠ ಬಾಳ್ ಠಾಕ್ರೆಗೆ ಶಾರೂಖ್ ಖಾನ್ ರಾಷ್ಟ್ರಪ್ರೇಮದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ಎಂದು ಎನ್‌ಸಿಪಿ ಶಾಸಕ ನವಾಬ್ ಮಲಿಕ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಆದರೆ ಈ ಆರೋಪಗಳನ್ನು ಹಗುರ ಮಾಡಲೆತ್ನಿಸಿರುವ ಶಿವಸೇನೆ ಸುಪ್ರೀಂ ನಾಯಕ, ಮುಂಬೈ ವಿರೋಧಿ ವೈರಸ್‌ಗಳು ಹೆಚ್ಚಾಗುತ್ತಿದ್ದು ಈಗ ಕೆದಕಲಾಗುತ್ತಿರುವುದು 'ಗೋಬೆಲ್ಸ್ ಪ್ರಚಾರ ತಂತ್ರ'ದ ಭಾಗ ಎಂದು ಬಣ್ಣಿಸಿದ್ದಾರೆ.
PTI
2004ರಲ್ಲಿ ಮಿಯಾಂದಾದ್‌ರವರು ಠಾಕ್ರೆಯವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಮಿಯಾಂದಾದ್‌ರನ್ನು ಶಿವಸೇನೆ ಅಪಾದಮಸ್ತಕ ಹೊಗಳಿತ್ತು ಎಂದು ಎಂದು ಎನ್‌ಸಿಪಿ ಆರೋಪಿಸಿತ್ತು.
ಇದಕ್ಕೆ ಪಕ್ಷದ ಮುಖವಾಣಿ 'ಸಾಮ್ನಾ'ದಲ್ಲಿ ಉತ್ತರಿಸಿರುವ ಠಾಕ್ರೆ, ಪಾಕಿಸ್ತಾನಿ ಕ್ರಿಕೆಟ್ ಆಟಗಾರ ನನ್ನ ಮನೆಗೆ ಭೇಟಿ ನೀಡಿರುವುದನ್ನು ರಾಜಕೀಕರಣಗೊಳಿಸಲಾಗುತ್ತಿದೆ. ಆದರೆ ಇದರಿಂದ ಶಿವಸೇನೆ ಮತ್ತು ಶಿವಸೈನಿಕರ ಮೇಲೆ ಯಾವುದೇ ಪರಿಣಾಮ ಬೀರದು ಎಂಬುದನ್ನು ನಾನು ಸ್ಪಷ್ಟಪಡಿಸುತ್ತಿದ್ದೇನೆ ಎಂದಿದ್ದಾರೆ.
ಮುಂಬೈ ಮತ್ತು ಮಹಾರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಮುಂಬೈಯನ್ನು ಮಹಾರಾಷ್ಟ್ರ ಪಡೆದಿರುವುದಕ್ಕೆ ಕೆಲವು ಜನಗಳಿಗೆ ನುಂಗಲಾರದ ತುತ್ತಾಗಿರುವುದರಿಂದ ಇಂತಹ ನಡೆಗಳು ನಮಗೆ ಅಚ್ಚರಿ ತಂದಿಲ್ಲ ಎಂದು ಠಾಕ್ರೆ ಬರೆದುಕೊಂಡಿದ್ದಾರೆ.
ಮಿಯಾಂದಾದ್ ತನ್ನ ಮನೆಗೆ ಭೇಟಿ ನೀಡಿರುವುದನ್ನು ಮಾಧ್ಯಮಗಳ ಒಂದು ಬಣ ಸುಣ್ಣ-ಬಣ್ಣ ಹಚ್ಚಿ ಪ್ರಚಾರ ನಡೆಸಲಾಗುತ್ತಿರುವುದನ್ನು 'ಗೋಬೆಲ್ಸ್ ಪ್ರಚಾರ'ದ ಒಂದು ಭಾಗ ಎಂದು ಟೀಕಿಸಿರುವ ಠಾಕ್ರೆ, ಭಾರತೀಯ ಕ್ರಿಕೆಟಿಗ ದಿಲೀಪ್ ವೆಂಗಸರ್ಕಾರ್ ಈ ಭೇಟಿಯನ್ನು ಆಯೋಜಿಸಿದ್ದರು ಎಂದಿದ್ದಾರೆ.
PTI
ಪಾಕಿಸ್ತಾನಿ ಕ್ರಿಕೆಟಿಗರು ಭಾರತದಲ್ಲಿ ಆಡಲು ಅವಕಾಶ ನೀಡಬೇಕೆಂಬ ಮನವಿಯ ಸಂಬಂಧ ಈ ಮಾತುಕತೆ ನಡೆದಿತ್ತು. ಆದರೆ ನಾನು ಅವರ ಬೇಡಿಕೆಯನ್ನು ತಳ್ಳಿ ಹಾಕಿದ್ದೆ ಎಂದು ಶಿವಸೇನೆ ನಾಯಕ ತಿಳಿಸಿದ್ದಾರೆ.
ಎನ್‌ಸಿಪಿ ಶಾಸಕ ಮಲಿಕ್ ಅವರು ಠಾಕ್ರೆಯವರನ್ನು ತರಾಟೆಗೆ ತೆಗೆದುಕೊಳ್ಳುತ್ತಾ, ಐದು ವರ್ಷಗಳ ಹಿಂದೆ ದಾವೂದ್ ಸಂಬಂಧಿಗೆ ಆರತಿ ಎತ್ತಿದ್ದವರಿಗೆ ಇಂದು ಶಾರೂಖ್ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ಎಂದಿದ್ದರು.
ಠಾಕ್ರೆಯವರು ಮೆಚ್ಚುಗೆ ಸೂಚಿಸಿದ್ದು ಕೇವಲ ಮಿಯಾಂದಾದ್ ಅಥವಾ ಪಾಕಿಸ್ತಾನಿ ಕ್ರಿಕೆಟಿಗನಿಗೆ ಮಾತ್ರವಲ್ಲ, ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಸಂಬಂಧಿಯನ್ನು ಎಂದು ಮಲಿಕ್ ಹಳೆ ವಿಷಯವನ್ನು ಕೆದಕಿದ್ದರು.
ಠಾಕ್ರೆಯವರು ಮಿಯಾಂದಾದ್‌ರನ್ನು ತನ್ನ ಮನೆಗೆ ಕರೆಸಿ, ಅವರು ಶಾರ್ಜಾದಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ನೀಡಿದ್ದ ಪ್ರದರ್ಶನವನ್ನು ಮನಸಾರೆ ಹೊಗಳಿದ್ದರು. ನಂತರ ಮಾತನಾಡಿದ್ದ ಠಾಕ್ರೆ, ತನಗೆ ಮಿಯಾಂದಾದ್ ಪ್ರಿಯ ಕ್ರಿಕೆಟಿಗ ಎಂದಿದ್ದರು. 1986ರ 'ಆಸ್ಟ್ರೇಲೇಷಿಯಾ ಕಪ್' ಫೈನಲ್ ಪಂದ್ಯದಲ್ಲಿ ಚೇತನ್ ಶರ್ಮಾರ ಎಸೆತಕ್ಕೆ ಮಿಯಾಂದಾದ್ ಸಿಕ್ಸರ್ ಎತ್ತಿ ಕಪ್ ಗೆದ್ದುಕೊಂಡದ್ದನ್ನು ಮರೆಯಲಾಗದು ಎಂದಿದ್ದರು ಎಂದು ಮಲಿಕ್ ಠಾಕ್ರೆಯವರ ಪಾಕಿಸ್ತಾನ ಪ್ರೇಮವನ್ನು ಕುಟುಕಿದ್ದರು.