ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೆಲೆಯೇರಿಕೆಗೆ ಪೆಟ್ರೋಲ್, ಡೀಸೆಲ್ ಸಾಥ್; ಕೇಂದ್ರದಿಂದ ಶಾಕ್? (fuel price | Petrol price hike | UPA govt | cylinder)
Bookmark and Share Feedback Print
 
ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ವಿಫಲವಾಗಿರುವ ಬೆನ್ನಿಗೆ ಜನತೆಗೆ ಮತ್ತೊಂದು ಗುದ್ದು ನೀಡುವ ಸಾಧ್ಯತೆಗಳಿದ್ದು, ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿಗಳ ಬೆಲೆ ಹೆಚ್ಚಿಸುವಂತೆ ಸರಕಾರ ನೇಮಿಸಿರುವ ಸಮಿತಿ ಶಿಫಾರಸು ಮಾಡಿದೆ.

ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ನೇಮಿಸಿದ್ದ ತಜ್ಞರ ಸಮಿತಿಯು ಬುಧವಾರ ತನ್ನ ಶಿಫಾರಸನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರ 4.72 ರೂಪಾಯಿ, ಡೀಸೆಲ್ 2.33 ರೂಪಾಯಿ ಹಾಗೂ ಸೀಮೆಎಣ್ಣೆ 6 ರೂಪಾಯಿಗಳಷ್ಟು ಹೆಚ್ಚಿಸುವಂತೆ ವರದಿ ನೀಡಿದೆ. ಅದಕ್ಕಿಂತಲೂ ಆಘಾತಕಾರಿ ವಿಚಾರವೆಂದರೆ ಅಡುಗೆ ಅನಿಲದ ದರವನ್ನು ಪ್ರತೀ ಸಿಲಿಂಡರಿಗೆ 100 ರೂಪಾಯಿ ಹೆಚ್ಚಿಸಬೇಕೆಂದು ಶಿಫಾರಸು ಮಾಡಿರುವುದು.

ತರಕಾರಿ ಮತ್ತು ಇತರ ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಿಸಲು ಯುಪಿಎ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳುತ್ತಾ ಬಂದಿದೆಯಾದರೂ ಇನ್ನೂ ಮಾರುಕಟ್ಟೆಯಲ್ಲಿ ಗಮನಾರ್ಹ ಬದಲಾವಣೆ ಕಂಡು ಬಂದಿಲ್ಲ. ಅದೇ ಹೊತ್ತಿನಲ್ಲಿ ಸಮಿತಿಯ ಶಿಫಾರಸನ್ನು ಕೇಂದ್ರವು ಪರಿಗಣನೆಗೆ ತೆಗೆದುಕೊಂಡಲ್ಲಿ ಜನಸಾಮಾನ್ಯರ ಮತ್ತು ಮಧ್ಯಮ ವರ್ಗದ ಜನತೆಯ ಬದುಕು ದುಸ್ತರವಾಗಬಹುದು ಎಂದು ಅಭಿಪ್ರಾಯಪಡಲಾಗಿದೆ.

ಆದರೆ ತಕ್ಷಣ ಬೆಲೆಯೇರಿಕೆ ಮಾಡುವುದರತ್ತ ಕೇಂದ್ರ ಸರಕಾರ ಒಲವು ಹೊಂದಿಲ್ಲ. ಅದರಲ್ಲೂ ಎಲ್‌ಪಿಜಿ ಮತ್ತು ಸೀಮೆಎಣ್ಣೆ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡುವ ಸಾಧ್ಯತೆಗಳು ಕಡಿಮೆ. ಆದರೆ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಏರಿಸುವ ಆಸ್ಥೆ ಕೇಂದ್ರದ್ದು ಎಂದು ಮೂಲಗಳು ಹೇಳಿವೆ.

ಅಲ್ಲದೆ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ನಿಯಂತ್ರಣವನ್ನು ತೈಲ ಕಂಪನಿಗಳಿಗೆ ಬಿಟ್ಟುಕೊಡಬೇಕು ಎಂಬ ಶಿಫಾರಸನ್ನು ಕೂಡ ತಜ್ಞರ ಸಮಿತಿ ಮಾಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಾದರೂ ತೈಲ ಕಂಪನಿಗಳು ಅಸಹಾಯಕವಾಗಿರುವ ಕಾರಣ ಭಾರೀ ನಷ್ಟಕ್ಕೊಳಗಾಗಿವೆ. ಇದನ್ನು ತಪ್ಪಿಸಲು ತೈಲ ಬೆಲೆಯನ್ನು ಸರಕಾರವು ನಿಯಂತ್ರಣ ಮುಕ್ತಗೊಳಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

ಕಿರೀಟ್ ಪಾರಿಖ್ ನೇತೃತ್ವದ ಸಮಿತಿಯು ತನ್ನ ವರದಿಯನ್ನು ಪೆಟ್ರೋಲಿಯಂ ಸಚಿವ ಮುರಳಿ ದಿಯೋರಾ ಅವರಿಗೆ ಸಲ್ಲಿಸಿದ್ದಾರೆ.

ಇದನ್ನು ವಾರದೊಳಗೆ ಸಚಿವ ಸಂಪುಟದಲ್ಲಿ ಮಂಡಿಸಲಾಗುತ್ತದೆ. ಈ ಕುರಿತ ಅಂತಿಮ ನಿರ್ಧಾರವನ್ನು ಪ್ರಧಾನಿಯವರ ಜತೆ ಚರ್ಚಿಸಿದ ನಂತರ ತೆಗೆದುಕೊಳ್ಳಲಾಗುತ್ತದೆ. ಈಗಲೇ ಯಾವುದೇ ಪ್ರತಿಕ್ರಿಯೆ ನೀಡಲಾರೆ ಎಂದು ಸಚಿವರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ