ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ವಿರೋಧಿ ಜಿಹಾದ್ ರ‌್ಯಾಲಿ
ಶ್ರೀನಗರ, ಗುರುವಾರ, 4 ಫೆಬ್ರವರಿ 2010( 15:33 IST )
ನಿಷೇಧಿತ ಭಯೋತ್ಪಾದಕ ಸಂಘಟನೆ 'ಲಷ್ಕರ್ ಇ ತೋಯ್ಬಾ'ದ ಅಂಗಸಂಸ್ಥೆಯಾಗಿರುವ 'ಜಮಾತ್ ಉದ್ ದಾವಾ' ನೇತೃತ್ವದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಗುರುವಾರ ಕಾಶ್ಮೀರದ ಕುರಿತ ಏಕತೆಯನ್ನು ಪ್ರದರ್ಶಿಸುವ ಭಾರತ ವಿರೋಧಿ ಬೃಹತ್ ಜಿಹಾದಿ ರ‌್ಯಾಲಿಯನ್ನು ನಡೆಸಲಾಗಿದೆ.
ಮುಂಬೈ ಭಯೋತ್ಪಾದನಾ ದಾಳಿ ನಡೆದ ಒಂದು ವರ್ಷದ ಬಳಿಕ ಮತ್ತೆ ಚಿಗಿತುಕೊಂಡಿರುವ ಜಮಾತ್ ಉದ್ ದಾವಾ (ಜೆಯುಡಿ) ಮುಜಾಫರಬಾದ್‌ನಲ್ಲಿ ನಡೆಸುತ್ತಿರುವ 'ಯಾಕ್ಜೆಹ್ತಿ ಇ ಕಾಶ್ಮೀರ್' ಸಭೆಯ (ಕಾಶ್ಮೀರಕ್ಕಾಗಿ ಏಕತೆ) ಕುರಿತು ನವದೆಹಲಿಯು ಕೂಲಂಕಷವಾಗಿ ಗಮನಿಸುತ್ತಿದೆ. ಗುರುವಾರ ಆರಂಭವಾಗಿರುವ ಈ ಸಭೆ ಮುಂದಿನ ಒಂದೆರಡು ದಿನಗಳ ಕಾಲ ಮುಂದುವರಿಯುವ ಸಾಧ್ಯತೆಗಳಿವೆ.
ಅಲ್ಲಿ ಯಾವ ನಿಲುವನ್ನು ಸಭೆ ತೆಗೆದುಕೊಳ್ಳುತ್ತದೆ ಎಂಬುದನ್ನು ನಾವು ನೋಡುತ್ತಿದ್ದೇವೆ ಎಂದು ಗೃಹಸಚಿವಾಲಯದ ಅಧಿಕಾರಿಗಳು ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಸೈಯದ್ ಸಲಾಹುದ್ದೀನ್ ಮತ್ತು ಜಮಾತ್ ಉದ್ ದಾವಾ ಮುಖ್ಯಸ್ಥ ಅಬ್ದುಲ್ ರೆಹಮಾನ್ ಮಕ್ಕಿ ಸೇರಿದಂತೆ ಅಗ್ರ ಜಿಹಾದಿ ನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ನಿರೀಕ್ಷಿಸಲಾಗುತ್ತಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಲಷ್ಕರ್ ಇ ತೋಯ್ಬಾ ಕಮಾಂಡರ್ ಹಾಗೂ ಜಮಾತ್ ಉದ್ ದಾವಾ ಮುಖ್ಯಸ್ಥ ಅಬ್ದುಲ್ ಅಜೀಲ್ ಆಲ್ವಿ ಈ ಸಭೆಯನ್ನು ಕರೆದಿದ್ದು, ಭಯೋತ್ಪಾದನಾ ಸಂಘಟನೆಗಳು ಮತ್ತೆ ತಮ್ಮ ಗಮನವನ್ನು ಜಮ್ಮು-ಕಾಶ್ಮೀರದತ್ತ ಹರಿಸಬೇಕು ಎಂಬ ಉದ್ದೇಶವನ್ನಿಟ್ಟುಕೊಳ್ಳಲಾಗಿದೆ.
ಇದೇ ರೀತಿಯ ಮತ್ತೊಂದು ರ‌್ಯಾಲಿಯನ್ನು ಶುಕ್ರವಾರ ಇಸ್ಲಾಮಾಬಾದ್‌ನಲ್ಲಿ ಮುಂಬೈ ದಾಳಿಯ ಹಿಂದಿನ ಪ್ರಮುಖ ಆರೋಪಿ ಎಂದು ಭಾರತ ಆರೋಪಿಸಿರುವ ಲಷ್ಕರ್ ಇ ತೋಯ್ಬಾ ಮುಖ್ಯಸ್ಥ ಹಫೀಜ್ ಸೈಯದ್ ನಡೆಸುವ ಸಾಧ್ಯತೆಗಳಿವೆ.
ಈ ಸಭೆಗೆ ಆಹ್ವಾನಿತರಾಗಿರುವ ಪಾಕಿಸ್ತಾನದ ಐಎಸ್ಐ ಮಾಜಿ ಮುಖ್ಯಸ್ಥ ಹಮೀದ್ ಗುಲ್ ಪ್ರತಿಕ್ರಿಯಿಸುತ್ತಾ, ಜಿಹಾದಿ ರ‌್ಯಾಲಿ ಬಗ್ಗೆ ಪಾಕಿಸ್ತಾನ ಸರಕಾರಕ್ಕೆ ಮಾಹಿತಿಯಿದೆ. ಈ ವಿಚಾರದಲ್ಲಿ ಭಾರತದ ಅಸಮಾಧಾನವನ್ನು ನಾವು ಲೆಕ್ಕಿಸುವುದಿಲ್ಲ ಎಂದಿದ್ದಾನೆ.
ಭಾರತದ ಇದರ ಕುರಿತು ಅಸಮಾಧಾನ ಹೊಂದಿದ್ದರೆ ಇರಲಿ ಬಿಡಿ ಎಂದು ಭಾರತದ ಟೀವಿ ವಾಹಿನಿಯೊಂದರ ಜತೆ ಮಾತನಾಡುತ್ತಾ ತಿಳಿಸಿದ್ದಾನೆ. ಅಲ್ಲದೆ ಇದು ಮಾನವೀಯತೆಯ ಉದ್ದೇಶವನ್ನಿಟ್ಟುಕೊಂಡ ಪ್ರಮುಖ ಸಭೆಯಾಗಿದ್ದು, ಭಾರತವು ಕಾಶ್ಮೀರ ವಿಚಾರದಲ್ಲಿ ವಾಸ್ತವತೆಯನ್ನು ಎದುರಿಸಬೇಕು ಎಂದಿದ್ದಾನೆ.
ವಿಶ್ವಸಂಸ್ಥೆಯಿಂದ ನಿಷೇಧಿಸಲ್ಪಟ್ಟಿರುವ ಜಮಾತ್ ಉದ್ ದಾವಾ ಭಯೋತ್ಪಾದಕ ಸಂಘಟನೆ ಎಂಬ ವಾದವನ್ನು ತಳ್ಳಿ ಹಾಕಿರುವ ಗುಲ್, ಭಾರತ ಮತ್ತು ಪಾಕಿಸ್ತಾನಗಳು ಭಯೋತ್ಪಾದಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ನಡುವಿನ ವ್ಯತ್ಯಾಸಗಳನ್ನು ಕಾಯ್ದುಕೊಳ್ಳಬೇಕು ಎಂದಿದ್ದಾನೆ.