ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೊನೆಗೂ 'ಸಾಮ್ನಾ' ವಿರುದ್ಧ ಕ್ರಮಕ್ಕೆ ಮುಂದಾದ ಮಹಾರಾಷ್ಟ್ರ (Maharashtra govt | Saamna | Raj Thackeray | MNS)
Bookmark and Share Feedback Print
 
ಕಳೆದ ಹಲವು ದಿನಗಳಿಂದ ಪ್ರಚೋದನಾಕಾರಿ ಲೇಖನ-ಸುದ್ದಿಗಳನ್ನು ಪ್ರಕಟಿಸುತ್ತಿರುವ ಶಿವಸೇನೆಯ ಮುಖವಾಣಿ 'ಸಾಮ್ನಾ' ವಿರುದ್ಧ ಕೊನೆಗೂ ಕಾನೂನು ಕ್ರಮಗಳನ್ನು ಕೈಗೊಳ್ಳುವ ಕೆಲಸಕ್ಕೆ ಮಹಾರಾಷ್ಟ್ರ ಸರಕಾರ ಕೈ ಹಾಕಿದೆ.

ಈ ಸಂಬಂಧ ಗೃಹಸಚಿವ ಆರ್.ಆರ್. ಪಾಟೀಲ್ ಅವರು ಗುರುವಾರ ರಾಜ್ಯದ ಅಡ್ವೊಕೇಟ್ ಜನರಲ್ ಅವರಿಗೆ ಪತ್ರವೊಂದನ್ನು ರವಾನಿಸಿದ್ದು, ಪತ್ರಿಕೆಯ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲು ಸಾಧ್ಯವೇ ಎಂದು ಅಭಿಪ್ರಾಯವನ್ನು ಕೇಳಿದ್ದಾರೆ.

ವಾರ್ತಾವಾಹಿನಿಯೊಂದರೊಂದಿಗೆ ಮಾತನಾಡುತ್ತಾ ಪಾಟೀಲ್, ಪರಿಮಿತಿಯನ್ನು ಉಲ್ಲಂಘಿಸುತ್ತಿರುವ ಪತ್ರಿಕೆಯ ವಿರುದ್ಧ ಕ್ರಮ ಕೈಗೊಳ್ಳುವುದು ಸಾಧ್ಯವೇ ಎಂದು ಎರಡು ವಾರಗಳೊಳಗೆ ಉತ್ತರಿಸುವಂತೆ ಕಾನೂನು ಇಲಾಖೆಗೆ ಕೇಳಲಾಗಿದೆ ಎಂದಿದ್ದಾರೆ.

ಕಾನೂನು ಇಲಾಖೆಯು ಇದಕ್ಕೆ ಒಪ್ಪಿಗೆ ಸೂಚಿಸಿದಲ್ಲಿ ಭಾರತೀಯ ದಂಡ ಸಂಹಿತೆ 153ರಡಿಯಲ್ಲಿ ಕೋಮು ಜಗಳ ಮತ್ತು ವೈರತ್ವಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪತ್ರಿಕೆಯ ಮೇಲೆ ಕ್ರಮ ಕೈಗೊಳ್ಳಬಹುದಾಗಿದೆ.

ಅವರ ವರ್ತನೆಗಳು ಇದೇ ರೀತಿ ಮುಂದುವರಿದಲ್ಲಿ ಪತ್ರಿಕೆ ಮತ್ತು ಅದರ ನಾಯಕರ ಮೇಲೆ ಕಠಿಣ ಕ್ರಮಗಳನ್ನು ಕಾನೂನಿನ ಪ್ರಕಾರ ಕೈಗೊಳ್ಳುತ್ತೇವೆ ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.

ಆದರೆ ಶಿವಸೇನೆ ಸರಕಾರದ ಕ್ರಮಗಳ ಕುರಿತು ತಲೆ ಕೆಡಿಸಿಕೊಂಡಂತಿಲ್ಲ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ 'ಸಾಮ್ನಾ' ಸಂಪಾದಕ ಹಾಗೂ ಪಕ್ಷದ ವಕ್ತಾರ ಸಂಜಯ್ ರಾವುತ್, ಪಕ್ಷದ ಮುಖವಾಣಿಯ ವಿರುದ್ಧ ಕ್ರಮ ಕೈಗೊಂಡಲ್ಲಿ ಅದು ಪಕ್ಷದ ಉತ್ಸಾಹದ ಮೇಲೆ ಯಾವುದೇ ದುಷ್ಪರಿಣಾಮ ಬೀರದು ಎಂದಿದ್ದಾರೆ.

ಅದೇ ಹೊತ್ತಿಗೆ ಮಹಾರಾಷ್ಟ್ರ ನವನಿರ್ಮಾಣ ವೇದಿಕೆಯ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆಯವರ ಮೇಲೂ ಕ್ರಮ ಕೈಗೊಳ್ಳಲು ಸರಕಾರ ಆಸಕ್ತಿ ತೋರಿಸಿದೆ ಎಂದು ವರದಿಗಳು ತಿಳಿಸಿವೆ.

ಕಳೆದ ಕೆಲವು ಸಮಯದಿಂದ ಬಾಲಿವುಡ್ ನಟ ಶಾರೂಖ್ ಖಾನ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ವಿರುದ್ಧ ಟೀಕಾ ಪ್ರಹಾರಗಳನ್ನು ನಡೆಸುತ್ತಿರುವ ಶಿವಸೇನೆ ನಿನ್ನೆ ಗೃಹಸಚಿವ ಪಿ. ಚಿದಂಬರಂ ಮೇಲೂ ಕಿಡಿ ಕಾರಿತ್ತು. ಪಾಕಿಸ್ತಾನವನ್ನು ಬೆಂಬಲಿಸುತ್ತಿರುವ ಸಚಿವರು ಪಾಕಿಸ್ತಾನದವರೋ? ಹಾಗಿದ್ದರೆ ಅಲ್ಲಿಗೆ ಹೋಗಿ ಎಂದು ಶಿವಸೇನೆ ಹೇಳಿತ್ತು.
ಸಂಬಂಧಿತ ಮಾಹಿತಿ ಹುಡುಕಿ