ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನನಗೆ ನೆರವು ನೀಡಿದ್ದೇ ದೆಹಲಿ ಮಾಜಿ ಶಾಸಕ: ಬಂಧಿತ ಉಗ್ರ! (Delhi bomber | Indian Mujahideen | Delhi MLA | Batla House)
2008ರ ದೆಹಲಿ ಸ್ಫೋಟ ಸಂಬಂಧ ಬಂಧಿತನಾಗಿರುವ ಇಂಡಿಯನ್ ಮುಜಾಹಿದೀನ್‌ನ ಶಂಕಿತ ಉಗ್ರ ಷಹಜಾದ್ ಅಲಾಂ ಸ್ಫೋಟಕ ರಸಹ್ಯವೊಂದನ್ನು ಬಾಯ್ಬಿಟ್ಟಿದ್ದಾನೆ.ಬಾಟ್ಲಾ ಹೌಸ್ ಎನ್‌ಕೌಂಟರ್ ನಂತರ ತನಗೆ ಆಶ್ರಯ ಮತ್ತು ಆರ್ಥಿಕ ನೆರವು ನೀಡಿದ್ದು ದೆಹಲಿಯ ಮಾಜಿ ಶಾಸಕ ಎಂಬುದಾಗಿ ಹೇಳಿದ್ದಾನೆ!
2008ರ ಸೆಪ್ಟೆಂಬರ್ 19ರಂದು ನಡೆದ ಬಾಟ್ಲಾ ಹೌಸ್ ಎನ್‌ಕೌಂಟರ್ ನಂತರ ಪರಾರಿಯಾಗುವ ಮುನ್ನ ಮನೆ ನೀಡಿ, ಆರ್ಥಿಕ ನೆರವು ನೀಡಿದ್ದೇ ದೆಹಲಿಯ ಮಾಜಿ ಶಾಸಕರೊಬ್ಬರು ಎಂದು ತನಿಖೆಯ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ. ಅಲ್ಲದೇ, ಘಟನೆಯ ನಂತರ ಬಂಧನದಿಂದ ತಪ್ಪಿಸಿಕೊಳ್ಳಲು ಬಿಹಾರ ಮೂಲದ ಕಿರಿಯ ಮಾಜಿ ಸಚಿವರೊಬ್ಬರು ಮತ್ತು ಮುಂಬೈಯ ಪ್ರತಿಷ್ಠಿತ ರಾಜಕಾರಣಿಯೊಬ್ಬರು ತನಗೆ ಸಹಾಯ ಮಾಡಿರುವುದಾಗಿ ಷಹಜಾದ್ ಆರೋಪಿಸಿದ್ದಾನೆ.
ಷಾಹಜಾದ್‌ನನ್ನು ಅಜಂಗಢದಲ್ಲಿ ಬಂಧಿಸಲಾಗಿತ್ತು. ನಂತರ ಉತ್ತರ ಪ್ರದೇಶದ ಪೊಲೀಸರು ಷಹಜಾದ್‌ನನ್ನು ಸೋಮವಾರ ದೆಹಲಿಯ ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ ಹಸ್ತಾಂತರಿಸಿದ್ದರು.
ಇದೀಗ ಇಂಡಿಯನ್ ಮುಜಾಹಿದೀನ್ ಚಟುವಟಿಕೆ, ಆತನಿಗೆ ನೆರವು ನೀಡಿದವರ ಕುರಿತು ಗುಪ್ತಚರ ಇಲಾಖೆ ತೀವ್ರ ವಿಚಾರಣೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ, ಬಾಟ್ಲಾ ಹೌಸ್ ಕಾರ್ಯಾಚರಣೆಯಲ್ಲಿ ಪೊಲೀಸರ ದಿಗ್ಭಂಧನದ ನಡುವೆಯೂ ಅರಿಜ್ ಅಲಿಯಾಸ್ ಜುನೈದ್ ಯಾವ ರೀತಿಯಲ್ಲಿ ತಪ್ಪಿಸಿಕೊಂಡ ಎಂಬ ಬಗ್ಗೆಯೂ ವಿಚಾರಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಸಾಕಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದ ಬಾಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣದಲ್ಲಿ ಮತ್ತೆ ಪ್ರಮುಖ ಹಾಲಿ ಮತ್ತು ಮಾಜಿ ರಾಜಕಾರಣಿಗಳ ಹೆಸರು ಕೇಳಿ ಬರುತ್ತಿರುವ ಮೂಲಕ ಮತ್ತಷ್ಟು ಕಗ್ಗಂಟಾಗಿದ್ದು, ಇದರಲ್ಲಿ ಯಾವ ಪಕ್ಷದ ರಾಜಕಾರಣಿಗಳು ಶಾಮೀಲಾಗಿದ್ದಾರೆ ಎಂಬುದು ಕುತೂಹಲದ ಪ್ರಶ್ನೆಯಾಗಿದೆ.