ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿ ಸರ್ವಾಡಳಿತ, ದಬ್ಬಾಳಿಕೆ ನಡೆಸುತ್ತಿದ್ದಾರೆ: ಕಾಂಗ್ರೆಸ್ (Cong MLA | Gujarat Chief Minister | Narendra Modi | Garib Kalyan Mela)
ಮೋದಿ ಸರ್ವಾಡಳಿತ, ದಬ್ಬಾಳಿಕೆ ನಡೆಸುತ್ತಿದ್ದಾರೆ: ಕಾಂಗ್ರೆಸ್
ಪಂಚಮಹಲ್, ಶುಕ್ರವಾರ, 5 ಫೆಬ್ರವರಿ 2010( 11:02 IST )
PTI
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸಿದ್ದ ಸರಕಾರಿ ಕಾರ್ಯಕ್ರಮಕ್ಕೆಂದು ತೆರಳುತ್ತಿದ್ದ ಮೂವರು ಚುನಾಯಿತ ಕಾಂಗ್ರೆಸ್ ಜನ ಪ್ರತಿನಿಧಿಗಳನ್ನು ಬಂಧಿಸಿದ್ದನ್ನು ಖಂಡಿಸಿರುವ ಕಾಂಗ್ರೆಸ್, ಸರಕಾರವು ದಬ್ಬಾಳಿಕೆ ನಡೆಸುತ್ತಿದೆ ಎಂದು ಆರೋಪಿಸಿದೆ.
ಪಂಚಮಹಲ್ ಜಿಲ್ಲೆಯಲ್ಲಿನ ಕದನ ತಾಲೂಕಿನಲ್ಲಿ ರಾಜ್ಯ ಸರಕಾರವು ಆಯೋಜಿಸಿದ್ದ 'ಗರೀಬ್ ಕಲ್ಯಾಣ್ ಮೇಳ' ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರನ್ನು ಭಾಗವಹಿಸದಂತೆ ಬಂಧಿಸಲಾಗಿತ್ತು. ಭದ್ರತಾ ಕಾರಣಗಳನ್ನು ಮುಂದೊಡ್ಡಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು ಎಂದು ಹೇಳಲಾಗಿದೆ.
ಸಂತ್ರಾಂಪುರ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಪರಂಜಯಾದಿತ್ಯ ಸಿಂಹಜೀ ಪರ್ಮಾರ್ ಮತ್ತು ಲೂನಾವಾಡ ಶಾಸಕ ಹೀರಾಭಾಯ್ ಪಟೇಲ್‌ರನ್ನು ಪಂಚಮಹಲ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರೆ, ದಾಹೋದ್ ಕ್ಷೇತ್ರದ ಕಾಂಗ್ರೆಸ್ ಸಂಸದೆ ಡಾ. ಪ್ರಭಾ ತವಿಯಾಡ್ ಅವರನ್ನು ದಾಹೋದ್ ಪೊಲೀಸರು ತಡೆದಿದ್ದರು. ಅವರನ್ನು ಮುಖ್ಯಮಂತ್ರಿಯವರ ಕಾರ್ಯಕ್ರಮ ಮುಕ್ತಾಯವಾದ ನಂತರ ಬಿಡುಗಡೆ ಮಾಡಲಾಯಿತು.
ಮುಂಬೈ ಪೊಲೀಸ್ ಕಾಯ್ದೆ ಸೆಕ್ಷನ್ 67 ಮತ್ತು 69ರಡಿಯಲ್ಲಿ ಪರ್ಮಾರ್ ಮತ್ತು ಪಟೇಲ್ ಅವರನ್ನು ಬಂಧಿಸಿ ಕಾರ್ಯಕ್ರಮ ಮುಗಿದ ನಂತರ ಬಿಡುಗಡೆ ಮಾಡಲಾಗಿದೆ ಎಂದು ಪಂಚಮಹಲ್ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
ಇದೇ ರೀತಿ ದಾಹೋದ್ ಪೊಲೀಸರು ತವಿಯಾಡ್ ಅವರನ್ನು ಕೂಡ ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ.
ಬೆಳಗ್ಗಿನಿಂದಲೇ ನನ್ನ ಮನೆಯ ಸುತ್ತ ಪೊಲೀಸರು ಕಾದು ಕುಳಿತಿದ್ದರು. ನಾನೊಬ್ಬ ಜನ ಪ್ರತಿನಿಧಿಯಾಗಿದ್ದುದರಿಂದ ನನಗೆ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನವಿದ್ದ ಹೊರತಾಗಿಯೂ ಭದ್ರತಾ ಕಾರಣಗಳ ಹಿನ್ನೆಲೆಯಲ್ಲಿ 'ಗರೀಬ್ ಕಲ್ಯಾಣ್ ಮೇಳ'ದಲ್ಲಿ ಭಾಗವಹಿಸಬಾರದು ಎಂದು ನನಗೆ ಸೂಚನೆ ನೀಡಿದ್ದರು ಎಂದು ಪರ್ಮಾರ್ ದೂರಿದ್ದಾರೆ.
ಇದು ಸರ್ವಾಡಳಿತ ಧೋರಣೆಯಾಗಿದ್ದು, ದಬ್ಬಾಳಿಕೆ ನಡೆಸಲಾಗಿದೆ. ನಾನೊಬ್ಬ ಜನಗಳ ಪ್ರತಿನಿಧಿಯಾಗಿರುವುದರಿಂದ ಸರಕಾರ ನನ್ನ ಕ್ಷೇತ್ರದಲ್ಲಿ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನನಗೆ ಎಲ್ಲಾ ಹಕ್ಕುಗಳಿವೆ. ಆದರೆ ನನ್ನನ್ನು ತಡೆಯಲಾಯಿತು ಎಂದು ಅವರು ಆರೋಪಿಸಿದ್ದಾರೆ.