ರಾಹುಲ್ ಗಾಂಧಿಯವರ ಮುಂಬೈ ಭೇಟಿಯನ್ನು ತೀವ್ರವಾಗಿ ವಿರೋಧಿಸಿ ಕಪ್ಪು ಬಾವುಟ ತೋರಿಸಿ ತಡೆಯಲೆತ್ನಿಸಿದ ಸಾವಿರಾರು ಶಿವಸೇನೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದು, ಕಾಂಗ್ರೆಸ್ ಯುವ ನಾಯಕನಿಗೆ ಭಾರೀ ಭದ್ರತೆಯನ್ನು ನೀಡಲಾಗಿದೆ.
ರಾಹುಲ್ ಮುಂಬೈ ಭೇಟಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಶಿವಸೇನೆ, ಅವರನ್ನು ನಗರಕ್ಕೆ ಕಾಲಿಡಲು ಬಿಡುವುದಿಲ್ಲ ಎಂದು ಗುಟುರು ಹಾಕಿತ್ತು. ಅಲ್ಲದೆ ಎಲ್ಲಾ ಮರಾಠಿಗರು ರಾಹುಲ್‌ಗೆ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಸ್ವಾಗತ ಕೋರಬೇಕು ಎಂದು ತನ್ನ ಕಾರ್ಯಕರ್ತರಿಗೆ ಪಕ್ಷವು ಕರೆ ನೀಡಿತ್ತು.
ಆದರೆ ಎಲ್ಲಾ ಅಡೆ-ತಡೆಗಳನ್ನೂ ಮೀರಿ ರಾಹುಲ್ ಇಂದು ಬೆಳಿಗ್ಗೆ 11 ಗಂಟೆ ಹೊತ್ತಿಗೆ ಮುಂಬೈಗೆ ಆಗಮಿಸಿದ್ದು, ಬಿಗಿಭದ್ರತೆಯಲ್ಲಿ ಅವರನ್ನು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಈ ಸಂದರ್ಭದಲ್ಲಿ ಅಲ್ಲಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಾವಿರಾರು ಶಿವಸೇನೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಬೈ ಎಲ್ಲಾ ಭಾರತೀಯರಿಗೆ ಸೇರಿದ್ದು ಮತ್ತು ಮುಂಬೈಯನ್ನು ಭಯೋತ್ಪಾದಕರಿಂದ ರಕ್ಷಿಸಿದ್ದು ಭಾರತದ ಎಲ್ಲೆಡೆಯ ಅದರಲ್ಲೂ ಬಿಹಾರ ಮತ್ತು ಉತ್ತರ ಪ್ರದೇಶದ ಎನ್‌ಎಸ್‌ಜಿ ಕಮಾಂಡೋಗಳು. ಆ ಸಂದರ್ಭದಲ್ಲಿ ಯಾಕೆ ಮುಂಬೈಯೇತರ ಕಮಾಂಡೋಗಳು ಬೇಡ ಎಂದು ಶಿವಸೇನೆ ಹೇಳಿರಲಿಲ್ಲ. ದಾಳಿ ಸಂದರ್ಭದಲ್ಲಿ ಶಿವಸೇನೆ ಎಲ್ಲಿ ಹೋಗಿತ್ತು ಎಂದು ರಾಹುಲ್ ಪ್ರಶ್ನಿಸುವ ಮೂಲಕ ಶಿವಸೇನೆಯನ್ನು ಬಡಿದೆಬ್ಬಿಸಿದ್ದರು.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಶಿವಸೇನೆ, ರಾಹುಲ್ ಮುಂಬೈ ಹುತಾತ್ಮರಿಗೆ ಅವಮಾನ ಮಾಡಿದ್ದಾರೆ. ಮುಂಬೈ ಬಗ್ಗೆ ನಮಗೆ ಯಾರೂ ಹೇಳಿಕೊಡಬೇಕಾಗಿಲ್ಲ. ಮುಂಬೈ ಮರಾಠಿಗರದ್ದು. ಇಟಾಲಿಯನ್ ಮಮ್ಮಿಯದ್ದಲ್ಲ ಎಂದು ತಿರುಗೇಟು ನೀಡಿತ್ತು.
ಆರಂಭದಲ್ಲಿ ಜುಹುವಿನಲ್ಲಿನ ಬಾಯ್ದಾಸ್ ಆಡಿಟೋರಿಯಂನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿರುವ ರಾಹುಲ್, ಅಪರಾಹ್ನ ಮುಂಬೈಯ ಈಶಾನ್ಯ ಉಪನಗರ ಘಾಟ್ಕೊಪ್ಪರ್‌ನಲ್ಲಿನ ರಾಂಭಾಯ್ ಅಂಬೇಡ್ಕರ್ ನಗರದಲ್ಲಿನ ಕೊಳೆಗೇರಿಗಳಿಗೆ ಭೇಟಿ ನೀಡಲಿದ್ದಾರೆ.
ರಾಹುಲ್ ಆಯ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ಭಾರತ ರತ್ನ ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುತ್ತಳಿಗೆ ಗೌರವ ಸಲ್ಲಿಸಿ ಕೊಳೆಗೇರಿಯ ಯುವಜನರೊಂದಿಗೆ ಸಮಾಲೋಚನೆ ನಡೆಸುತ್ತಾರೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.