ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಲ್ಯಾಣ್ ಸಂಬಂಧ ಮುಸ್ಲಿಮರಿಗೆ ಆಘಾತ ತಂದಿತ್ತು: ಅಮರ್ ಸಿಂಗ್
(Amar Singh | Samajwadi Party | dust bin | Mulayam singh Yadav)
ಕಲ್ಯಾಣ್ ಸಂಬಂಧ ಮುಸ್ಲಿಮರಿಗೆ ಆಘಾತ ತಂದಿತ್ತು: ಅಮರ್ ಸಿಂಗ್
ನವದೆಹಲಿ, ಶುಕ್ರವಾರ, 5 ಫೆಬ್ರವರಿ 2010( 12:10 IST )
ಕಸದಂತೆ ಕಂಡರು, ನನ್ನನ್ನು ಎಲ್ಲರೂ ಎಂದು ಪ್ರಲಾಪಿಸುತ್ತಿರುವ ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್, ಅಂದು ಕಲ್ಯಾಣ್ ಸಿಂಗ್‌ರ ತಲೆಗೆ ಕೆಂಪು ಟೋಪಿ ಇಟ್ಟಾಗ ಹಲವು ಮುಸ್ಲಿಂ ನಾಯಕರು ಆಘಾತಕ್ಕೊಳಗಾಗಿದ್ದರು ಎಂದು ಹೇಳಿದ್ದಾರೆ.
ಕಲ್ಯಾಣ್ ಸಿಂಗ್ ಅವರ ತಲೆಯ ಮೇಲೆ ಸಮಾಜವಾದಿ ಪಕ್ಷದ ಕೆಂಪು ಟೋಪಿಯನ್ನು ಇಡಬೇಕೆಂದು ನಾನು ಮುಲಾಯಂ ಸಿಂಗ್ ಅವರ ಕಿವಿಯೂದಿದುವಂತಹ ಕೆಲಸವನ್ನು ನಾನು ಮಾಡಿದ್ದೇನೆ ಎಂದು ನಿಮಗೆ ಅನ್ನಿಸುತ್ತಿದೆಯೇ? ಖಂಡಿತಾ ಇಲ್ಲ. ಕಲ್ಯಾಣ್ ಸಿಂಗ್‌ರವರನ್ನು ಪಕ್ಷಕ್ಕೆ ಸೇರಿಸಿಕೊಂಡ ನಿರ್ಧಾರ ಹಲವು ಮುಸ್ಲಿಂ ನಾಯಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು ಎಂದು ಅಮರ್ ತಿಳಿಸಿದ್ದಾರೆ.
PTI
ಆದರೆ ಆ ಹೊತ್ತಿಗೆ ಅವರು 'ಕಲ್ಯಾಣ್ ಸಿಂಗ್ ಜಿಂದಾಬಾದ್' ಎಂಬ ಘೋಷಣೆಗಳನ್ನು ಕೂಗುತ್ತಿದ್ದರು. ಇದಕ್ಕೆ ಮುಖ್ಯ ಕಾರಣರು ಈಗಿನ ರಾಷ್ಟ್ರೀಯ ವಕ್ತಾರ ಮೋಹನ್ ಸಿಂಗ್ ಮತ್ತು ರಾಮ್ ಗೋಪಾಲ್ ಯಾದವ್ ಆಗಿದ್ದರೂ ಆರೋಪವನ್ನು ಮಾತ್ರ ನನ್ನ ಮೇಲೆ ಹೊರಿಸಲಾಯಿತು ಎಂದರು.
ಅಯೋಧ್ಯೆಯ ವಿವಾದಿತ ಶ್ರೀರಾಮ ಜನ್ಮಭೂಮಿಯಲ್ಲಿನ ಬಾಬ್ರಿ ಮಸೀದಿ ಧ್ವಂಸ ನಡೆಯುವಾಗ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್, ಕರಸೇವಕರನ್ನು ತಡೆಯುವ ಬದಲು ಬೆಂಬಲ ನೀಡಿದ್ದರು ಎಂಬ ಆರೋಪವಿದೆ. ನಂತರದ ದಿನಗಳಲ್ಲಿ ಬಿಜೆಪಿಯಲ್ಲೇ ಮೂಲೆಗುಂಪಾಗಿದ್ದ ಕಲ್ಯಾಣ್ ಹೊಸ ಪಕ್ಷವೊಂದನ್ನು ಸ್ಥಾಪಿಸಿದ್ದರಾದರೂ ಹಲವು ಸಮಯ ಮುಂದುವರಿದಿರಲಿಲ್ಲ.
ಅಯೋಧ್ಯೆ ವಿಚಾರದಲ್ಲಿ ಕಲ್ಯಾಣ್ ಮೇಲೆ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದ ಸಮಾಜವಾದಿ ಪಕ್ಷವು ಅವರನ್ನು ತೀವ್ರ ವಿರೋಧಗಳ ಹೊರತಾಗಿಯೂ ಬರ ಮಾಡಿಕೊಂಡಿತ್ತು. ಇದು ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿತ್ತಲ್ಲದೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಭಾರೀ ಹಿನ್ನಡೆಗೂ ಹೇತುವಾಗಿತ್ತು ಎಂದು ಹೇಳಲಾಗಿದೆ.
ಪಕ್ಷದಲ್ಲಿರುವಾಗ ನನ್ನನ್ನು ಎಲ್ಲರೂ ಕಸದಂತೆ, ಕಸದ ತೊಟ್ಟಿಯಂತೆ ಬಳಸಿಕೊಂಡರು. ನನ್ನ ಹೆಸರನ್ನು ಬಳಸುತ್ತಾ ಅಧಿಕಾರವನ್ನೆಲ್ಲ ಉಳಿದವರು ಚಲಾಯಿಸುತ್ತಿದ್ದರು. ಅವರು ನಿರ್ಧಾರ ತೆಗೆದುಕೊಂಡ ಬಳಿಕ ಅದು ನನ್ನ ನಿರ್ಧಾರವೆಂಬಂತೆ ಬಿಂಬಿಸಿ ಬಲಿಪಶು ಮಾಡಿದರು. ಹಾಗಾಗಿ ಎಲ್ಲಾ ನಿರ್ಧಾರಗಳೂ ನನ್ನವು ಎಂಬಂತೆ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಯಿತು ಎಂದು ಅಮರ್ ಇದೇ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.
ಆರೋಗ್ಯ ಸಂಬಂಧಿ ಕಾರಣಗಳನ್ನು ಮುಂದಿಟ್ಟು ಪಕ್ಷದ ಪ್ರಮುಖ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದ ಅಮರ್ ಸಿಂಗ್ ಅವರನ್ನು ಇತ್ತೀಚೆಗಷ್ಟೇ ಪಕ್ಷವು ಉಚ್ಛಾಟಿಸಿತ್ತು. ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಮತ್ತು ಅವರ ಸಂಬಂಧಿ ರಾಮ್ ಗೋಪಾಲ್ ಯಾದವ್ ಜತೆಗಿನ ವಿರಸವೇ ಪಕ್ಷದಿಂದ ದೂರ ಹೋಗಲು ಕಾರಣ ಎಂದು ಹೇಳಲಾಗುತ್ತಿದೆ.