ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಳಂಕಿತರಿಗೆ ಪದ್ಮ; ಸರ್ಕಾರದ ನಿಲುವಿಗೆ ರಾಷ್ಟ್ರಪತಿ ವಿರೋಧ (Padma Bhushan | Sant Singh Chatwal | Pratibha Patil | Rashtrapati Bhavan)
Bookmark and Share Feedback Print
 
PTI
ವಿವಾದಿತ ಅನಿವಾಸಿ ಭಾರತೀಯ ಹೊಟೇಲ್ ಉದ್ಯಮಿ ಸಂತಾ ಸಿಂಗ್ ಛತ್ವಾಲ್‌ರಿಗೆ ರಾಷ್ಟ್ರದ ಉನ್ನತ ಗೌರವ ಪದ್ಮಭೂಷಣ ನೀಡುವುದನ್ನು ಆರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ಸಿಂಗ್ ಪಾಟೀಲ್ ವಿರೋಧ ವ್ಯಕ್ತಪಡಿಸಿದ್ದರು ಎಂದು ವರದಿಗಳು ಹೇಳಿವೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಬ್ಯಾಂಕ್ ವಂಚನೆ ಪ್ರಕರಣದ ವಿವಾದಿತ ವ್ಯಕ್ತಿಯೊಬ್ಬರಿಗೆ ಈ ಪ್ರಶಸ್ತಿ ನೀಡಬೇಕೆಂಬ ಪಟ್ಟಿಯನ್ನು ರಾಷ್ಟ್ರಪತಿಯವರಿಗೆ ಹಸ್ತಾಂತರಿಸಿದಾಗ ಪಾಟೀಲ್ ಉತ್ಸುಕತೆ ತೋರಿಸದೆ, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇಳಿಕೊಂಡಿದ್ದರು.

ಆಗ ರಾಷ್ಟ್ರಪತಿಯವರಿಗೆ ಭರವಸೆ ನೀಡಿದ್ದ ಸರಕಾರ, ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುವ ಮಾರ್ಚ್ ತಿಂಗಳ ಮೊದಲು ಈ ಬಗ್ಗೆ ಯಾವುದೇ ವಿರೋಧಗಳು ಬಂದಲ್ಲಿ ಪಟ್ಟಿಯಿಂದ ಹೆಸರನ್ನು ಕೈ ಬಿಡುವುದಾಗಿ ಹೇಳಿತ್ತು ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ವಿವಾದವೇನಾದರೂ ಉಂಟಾದಲ್ಲಿ ಛತ್ವಾಲ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವುದರಿಂದ ಹಿಂದೆ ಸರಿಯುವುದಾಗಿ ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಪ್ರತಿಭಾ ಪಾಟೀಲ್ ಅವರಿಗೆ ಭರವಸೆ ನೀಡಿದ್ದರು. ಆ ಬಳಿಕವಷ್ಟೇ ರಾಷ್ಟ್ರಪತಿಗಳು ಛತ್ವಾಲ್ ಪದ್ಮಭೂಷಣಕ್ಕೆ ಅಂಗೀಕಾರ ನೀಡಿದ್ದರು ಎಂದು ಹೇಳಲಾಗಿದೆ.

ಅಲ್ಲದೆ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಛತ್ವಾಲ್ ವಿರುದ್ಧ ಮೇಲ್ಮನವಿ ಮಾಡುವುದಿಲ್ಲ ಎಂದು ಈ ಹಿಂದೆ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ನಿರ್ಧಾರ ಕೈಗೊಂಡಿದೆ ಎಂದೂ ರಾಷ್ಟ್ರಪತಿಯವರಿಗೆ ಪಿಳ್ಳೈ ವಿವರಿಸಿದ್ದರು.

ಅದಕ್ಕಿಂತಲೂ ಆಸಕ್ತಿದಾಯಕ ವಿಚಾರವೆಂದರೆ ಛತ್ವಾಲ್‌ರನ್ನು ಇಬ್ಬರು ಕೇಂದ್ರ ಮಂತ್ರಿಗಳು ಬೆಂಬಲಿಸಿರುವುದು. ನಾಗರಿಕ ವಾಯುಯಾನ ಸಚಿವ ಪ್ರಫುಲ್ ಪಟೇಲ್ ಮತ್ತು ಸಾಗರೋತ್ತರ ವ್ಯವಹಾರಗಳ ಸಚಿವ ವಯಲಾರ್ ರವಿ ಪ್ರಶಸ್ತಿ ನಾಮಕರಣಕ್ಕೆ ಬೆಂಬಲವಾಗಿದ್ದರು ಎಂದು ಪತ್ರಿಕೆ ಹೇಳಿದೆ.

ಕಳಂಕಿತರಿಗೆ ಪ್ರಶಸ್ತಿ ಪ್ರಕಟಿಸಿದ ಕ್ರಮವನ್ನು ವಿರೋಧಿಸಿ ಬಿಜೆಪಿ ಸೇರಿದಂತೆ ಕೆಲವು ಪಕ್ಷಗಳು ರಾಷ್ಟ್ರಪತಿ ಮತ್ತು ಪ್ರಧಾನಿಯವರಿಗೆ ಪತ್ರಗಳನ್ನು ಬರೆದು, ಗೌರವವನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದ್ದವು.
ಸಂಬಂಧಿತ ಮಾಹಿತಿ ಹುಡುಕಿ