ಶಿವಸೇನೆಯ ಪ್ರತಿರೋಧದ ನಡುವೆಯೂ ಭಾರೀ ಭದ್ರತೆಯೊಂದಿಗೆ ಮುಂಬೈಯ ಹಲವೆಡೆ ವಿಹರಿಸಿದ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿಯವರ ಕಾಲಿನಿಂದ ತಪ್ಪಿದ ಚಪ್ಪಲಿಯನ್ನು ಮಹಾರಾಷ್ಟ್ರ ಸಚಿವರೊಬ್ಬರು ಯಾವುದೇ ಮುಜುಗರವಿಲ್ಲದೆ ಎತ್ತಿ ಕೊಟ್ಟ ಪ್ರಸಂಗವೊಂದು ವರದಿಯಾಗಿದೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ ಅವರ ಚಪ್ಪಲಿ ಜಾರಿತ್ತು. ಈ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ರಮೇಶ್ ಬಾಗ್ವೆಸ್ತೇಯವರು ಚಪ್ಪಲಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿಯವರಿಗೆ ಎತ್ತಿಕೊಟ್ಟು ಅಚ್ಚರಿ ಮೂಡಿಸಿದರು.
ಅದೇ ಹೊತ್ತಿಗೆ ರಾಹುಲ್ ನಿರೀಕ್ಷೆಯಲ್ಲಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌಹಾನ್‌ರವರು ಗಂಟೆಗಳಿಗೂ ಹೆಚ್ಚು ಕಾಲ ಮರದಡಿಯಲ್ಲಿ ಕಾದು ಕುಳಿತರೂ ತಾಳ್ಮೆ ಕಳೆದುಕೊಂಡಿರಲಿಲ್ಲ ಎಂದು ಮೂಲಗಳು ಹೇಳಿವೆ.
ಲೋಕಲ್ ರೈಲಿನಲ್ಲಿ 'ಯುವರಾಜ' ಶಿವಸೇನೆಯ ಬೆದರಿಕೆಗಳ ಹೊರತಾಗಿಯೂ ಸುರಕ್ಷತೆಯ ಕಡೆ ಹೆಚ್ಚು ಗಮನ ಹರಿಸದ ರಾಹುಲ್ ಗಾಂಧಿ, ಮುಂಬೈಯಲ್ಲಿನ ಲೋಕಲ್ ರೈಲಿನಲ್ಲೇ ಪ್ರಯಾಣಿಸಿ ಅಚ್ಚರಿ ಹುಟ್ಟಿಸಿದರು.
ಭದ್ರತಾ ಪರಿಶೀಲನೆಗಳು ಮತ್ತು ಕಾಯುತ್ತಿದ್ದ ಹೆಲಿಕಾಫ್ಟರನ್ನು ಅಲಕ್ಷಿಸಿದ ರಾಹುಲ್ ಅಂಧೇರಿಯಿಂದ ಘಾಟ್ಕೊಪ್ಪರ್‌ಗೆ ಸ್ಥಳೀಯ ರೈಲಿನ ಪ್ರಥಮ ದರ್ಜೆ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸಿ ಸಹ ಪ್ರಯಾಣಿಕರ ಜತೆ ಮಾತುಕತೆ ನಡೆಸಿದರು.
ಕೊನೆಯ ಕ್ಷಣದಲ್ಲಿ ತನ್ನ ಪ್ರಯಾಣದ ಯೋಜನೆಯನ್ನು ಬದಲಿಸಿದ ರಾಹುಲ್ ಮಾರ್ಗದ ಕುರಿತು ಕೊಂಚ ಹೊತ್ತಿಗೆ ಮುಂಚೆ ಭದ್ರತಾ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿ ರೈಲ್ವೇ ನಿಲ್ದಾಣಗಳಲ್ಲಿ ತಪಾಸಣೆ ನಡೆಸಿ ಸುರಕ್ಷತೆಯನ್ನು ಖಚಿತಪಡಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.