ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರೆಸಾರ್ಟ್‌ಗಳಲ್ಲಿ ಮಜಾ ಮಾಡುವ ಹೈಟೆಕ್ ಭಿಕ್ಷುಕನಿವನು..!
(High-profile beggar | Chandigarh | Shankar Mehta | government guest-house)
ಮೊಬೈಲುಗಳು, ವಾಚುಗಳು ಸೇರಿದಂತೆ ಅತ್ಯಾಧುನಿಕ ಎಲೆಕ್ಟ್ರಾನಿಕ್ ಪರಿಕರಗಳನ್ನು ಹೊಂದಿರುವ, ಸತತ ಪ್ರವಾಸಗಳನ್ನು ಮಾಡುತ್ತಿರುವ ಹಾಗೂ ಐಷಾರಾಮಿ ಹೊಟೇಲುಗಳು, ರೆಸಾರ್ಟ್‌ಗಳಲ್ಲಿ ಮಜಾ ಮಾಡುವ ಭಿಕ್ಷುಕನ ಕುರಿತು ಇದುವರೆಗೂ ಯಾರೂ ಕೇಳಿರಲಿಕ್ಕಿಲ್ಲ.
ಬೀದಿಯಲ್ಲಿ ಭಿಕ್ಷೆ ಬೇಡಿದ ಹಣವನ್ನು ಬ್ಯಾಂಕಿನಲ್ಲಿ ಕೂಡಿಟ್ಟವರ ಕಥೆಗಳನ್ನು ಓದಿದವರಿಗೆ ಇದೊಂದು ಭಿನ್ನ ವರದಿ. ಯಾಕೆಂದರೆ ಈಗ ಸಂಪಾದನೆ ಮಾಡಿದ್ದೆಲ್ಲವನ್ನೂ ಎಲ್ಲರಂತೆ ಬದುಕಬೇಕೆನ್ನುವ ಉದ್ದೇಶಕ್ಕಾಗಿ ಬಳಸಿ ಭಿಕ್ಷೆ ನೀಡಿದವರಿಗಿಂತಲೂ ಆರಾಮದಾಯಕ ಜೀವನ ನಡೆಸುತ್ತಿದ್ದ.
WD
ಶಂಕರ್ ಮೆಹ್ತಾ ಆಲಿಯಾಸ್ ಮೆಹ್ತೋ ಎಂಬ 52ರ ಹರೆಯದ ಕುಬೇರ ಪುತ್ರನನ್ನು ಗುರುವಾರ ರಾತ್ರಿ ಚಂಡೀಗಢದ ಸರಕಾರಿ ಅತಿಥಿಗೃಹದಿಂದಲೇ ಬಂಧಿಸಲಾಗಿದೆ ಎಂದ ಕೂಡಲೇ ಆತ ಅದೆಂತಹ ಭಿಕ್ಷುಕನಿರಬಹುದು? ಕಳೆದೆರಡು ತಿಂಗಳುಗಳಿಂದ ಇದೇ ಅತಿಥಿಗೃಹದಲ್ಲಿ ತಂಗಿದ್ದ ಆತ 6,000 ರೂಪಾಯಿ ಬಾಡಿಗೆಯನ್ನೂ ನೀಡಿದ್ದಾನೆ-- ಅಂದರೆ ಆತನ ಸಂಪಾದನೆ ಎಷ್ಟಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳಬಹುದಾಗಿದೆ.
ಅಷ್ಟಕ್ಕೂ ಪೊಲೀಸರು ಬಂಧಿಸಿದ ಕೂಡಲೇ ಆತನೇನೂ ಧೃತಿಕೆಟ್ಟಿಲ್ಲ. ತಾನು ಭಿಕ್ಷೆ ಬೇಡುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾನೆಂದು 3,000 ರೂಪಾಯಿ ಹಣ ಮತ್ತು ಮೊಬೈಲ್ ಫೋನುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ.
ಆತ ಭಾರೀ ಬುದ್ಧಿವಂತ. ಸಿಕ್ಕಿ ಬೀಳುವ ಮೊದಲು ಅತಿಥಿಗೃಹದ ಅಧಿಕಾರಿಗಳಿಗೆ ತನ್ನ ವಿವರವನ್ನೂ ಬಿಟ್ಟುಕೊಟ್ಟಿರಲಿಲ್ಲ. ಅಲ್ಲದೆ ಮುಂದಿನ ಋತುವಿನಲ್ಲಿ ತನ್ನ ಕಾರ್ಯಸ್ಥಾನವನ್ನು ಶಿಮ್ಲಾಕ್ಕೆ ವರ್ಗಾಯಿಸುವ ಯೋಚನೆಯಿದೆ ಎಂದು ಹೇಳಿಕೊಂಡಿದ್ದಾನೆ ಎಂದು ಈ ವಿಚಿತ್ರ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ವಿವರಿಸುತ್ತಾರೆ.
ಆತನ ವಿರುದ್ಧ ಭಿಕ್ಷಾಟನೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದೇವೆ. ಮೊಬೈಲ್ ಪರಿಶೀಲಿಸಿ ಆತನ ಕರೆ ದಾಖಲೆಗಳನ್ನು ನೋಡಬೇಕು, ಆಗ ಆತ ಹೊಂದಿರುವ ಸಂಬಂಧಗಳ ಮಜಲುಗಳು ಬಯಲಿಗೆ ಬರಬಹುದು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಪ್ರದೇಶದ ರಾಯ್‌ಪುರ ಜಿಲ್ಲೆಯ ಮೆಹ್ತಾ, ಇದೇ ಮೊದಲ ಬಾರಿ ಬಂಧನಕ್ಕೊಳಗಾಗುತ್ತಿರುವುದಲ್ಲ. 2007ರಲ್ಲಿ ಇಲ್ಲಿನ ಐಷಾರಾಮಿ ಹೊಟೇಲೊಂದರಲ್ಲಿ ಉಳಿದುಕೊಂಡಿದ್ದಾಗಲೂ ಪೊಲೀಸರು ಜೈಲಿಗೆ ತಳ್ಳಿದ್ದರು. ಹೊಟೇಲಿನಲ್ಲಿ ಆತನ ಸ್ವಂತ ಟೀವಿ, ವಿಸಿಡಿ ಪ್ಲೇಯರ್ ಮತ್ತು ಇತರ ಎಲೆಕ್ಟ್ರಾನಿಕ್ ಪರಿಕರಗಳನ್ನೂ ಆಗ ವಶಪಡಿಸಿಕೊಳ್ಳಲಾಗಿತ್ತು.
ಪೊಲೀಸ್ ಮೂಲಗಳ ಪ್ರಕಾರ ಆತ ಕಳೆದ ಕೆಲವು ತಿಂಗಳುಗಳಿಂದ ಹಿಮಾಚಲ ಪ್ರದೇಶದಲ್ಲಿನ ಶಿಮ್ಲಾ ಮತ್ತು ಚಂಡೀಗಢದ ರೆಸಾರ್ಟ್‌ಗಳು ಮತ್ತು ಐಷಾರಾಮಿ ಹೊಟೇಲುಗಳಲ್ಲಿ ಕಾಲ ಕಳೆದಿದ್ದ. ಬಾಲ್ಯದಿಂದಲೇ ಭಿಕ್ಷಾಟನೆ ಮಾಡುತ್ತಾ ಕಾಲ ಕಳೆಯುತ್ತಿರುವ ಆತನಿಗೆ ಅದನ್ನು ಭರ್ಜರಿಯಾಗಿ ಖರ್ಚು ಮಾಡುವುದೂ ಗೊತ್ತು ಎಂದು ಪೊಲೀಸರು ವಿವರಣೆ ನೀಡುತ್ತಾರೆ.