ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಾನು ಭಾರತ ವಿರೋಧಿಯಲ್ಲ, ಠಾಕ್ರೆ ಭೇಟಿ ಮಾಡಲ್ಲ: ಶಾರೂಖ್
(Shiv Sena | Shah Rukh Khan | Pakistani cricketers | Bal Thackeray)
ನನ್ನ ಹೇಳಿಕೆಗಳನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ, ನಾನು ಯಾವುದೇ ಇತರ ದೇಶದ ಪರವಲ್ಲ ಮತ್ತು ನನ್ನ ಸ್ವಂತ ದೇಶದ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿರುವ ಬಾಲಿವುಡ್ ನಟ ಶಾರೂಖ್ ಖಾನ್, ಈ ಸಂಬಂಧ ಶಿವಸೇನೆ ವರಿಷ್ಠ ಬಾಳಾ ಠಾಕ್ರೆಯವರನ್ನು ಭೇಟಿ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.
ತನ್ನ ನೂತನ ಚಿತ್ರ 'ಮೈ ನೇಮ್ ಈಸ್ ಖಾನ್' ಪ್ರಚಾರಕ್ಕೆಂದು ನ್ಯೂಯಾರ್ಕ್, ಲಂಡನ್ ಮತ್ತು ಬರ್ಲಿನ್‌ಗಳಿಗೆ ತೆರಳಿದ್ದ ಕಾಜೋಲ್ ಮತ್ತು ಕರಣ್ ಜೋಹರ್ ಜತೆ ಮುಂಬೈಗೆ ವಾಪಸಾದ ಶಾರೂಖ್ ಅವರನ್ನು ಪ್ರತಿಕ್ರಿಯಿಸುವಂತೆ ಪತ್ರಕರ್ತರು ಮುತ್ತಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನನ್ನ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದೆನಿಸುತ್ತದೆ; ನಾನು ಎಲ್ಲಾ ರಾಷ್ಟ್ರಗಳೊಂದಿಗೆ ಅತ್ಯುತ್ತಮ ಸಂಬಂಧವನ್ನು ಬಯಸುವವನು. ಆದರೆ ಯಾವುದೇ ಕೆಲವು ದೇಶಗಳ ಪರವಾಗಿದ್ದು, ನನ್ನ ಸ್ವಂತ ದೇಶದ ವಿರುದ್ಧವಾಗಿದ್ದೇನೆ ಎಂದಲ್ಲ. ಇದು ಹೇಗೆ ಸಾಧ್ಯ ಎಂದು ವಿಮಾನ ನಿಲ್ದಾಣದ ಹೊರಗಡೆ ತಿಳಿಸಿದರು.
IFM
ದೇಶದ್ರೋಹಿ, ಪಾಕಿಸ್ತಾನ ಪ್ರೇಮಿ ಎಂದೆಲ್ಲಾ ಶಿವಸೇನೆಯ ವರಿಷ್ಠ ಬಾಳಾ ಠಾಕ್ರೆಯಿಂದ ಟೀಕೆಗೊಳಗಾಗಿರುವ ನೀವು 'ಮಾತೋಶ್ರೀ'ಗೆ ಹೋಗುತ್ತೀರಾ ಎಂಬ ಪ್ರಶ್ನೆಗವರು, ಠಾಕ್ರೆಯವರು ಹಿರಿಯ ನಾಯಕ ಮತ್ತು ಈ ಹಿಂದೆ ಅವರು ನನಗೆ ಆಹ್ವಾನ ನೀಡಿದಾಗಲೆಲ್ಲ ಹೋಗಿ ಮಾತನಾಡಿದ್ದೇನೆ ಎಂದರು.
ನಾನು ಹಲವಾರು ಬಾರಿ ಅಲ್ಲಿ ಭೇಟಿ ನೀಡಿದ್ದೇನೆ. ಹೌದು, ಅಲ್ಲಿಗೆ ಹೋಗಿ ಠಾಕ್ರೆಯವರೊಂದಿಗೆ ಚಹಾ ಕುಡಿಯಲು ಬಯಸುತ್ತಿದ್ದೇನೆ. ಆದರೆ ಈಗ ಉದ್ಭವಿಸಿರುವ ವಿಚಾರದ ನೆಲೆಯಲ್ಲಿ ಹೋಗಿ ಮಾತನಾಡಬೇಕೆಂದು ಅನ್ನಿಸುತ್ತಿಲ್ಲ. ಇಲ್ಲಿ ಅವರು ನನ್ನನ್ನು ಆಹ್ವಾನಿಸುವುದು ಅಥವಾ ನಾನು ಹೋಗುವುದರ ಹಿಂದೆ ಯಾವುದೇ ಕಾರಣಗಳಿಲ್ಲ. ಆದರೆ ನನ್ನ ನಿಲುವನ್ನು ಯಾರಿಗಾದರೂ ವಿವರಿಸಬೇಕೆಂಬುದಿದ್ದರೆ, ಅದನ್ನು ಈಗಾಗಲೇ ನಾನು ಮಾಡಿದ್ದೇನೆ. ಹಾಗಾಗಿ ಈ ವಿಚಾರದಲ್ಲಿ ಅಂತಹಾ ಯಾವುದೇ ಯೋಚನೆಗಳಿಲ್ಲ ಎಂದು ಶಾರೂಖ್ ವಿವರಣೆ ನೀಡಿದರು.
ನನ್ನ ಹೇಳಿಕೆಗಳನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ. ಒಬ್ಬ ಭಾರತೀಯನಾಗಿ ಏನು ಹೇಳಬಹುದೋ ಅದನ್ನಷ್ಟೇ ನಾನು ಹೇಳಿದ್ದೇನೆ. ನಾನು ಇವತ್ತು ಏನಾಗಿದ್ದೇನೋ ಅದಕ್ಕೆ ಕಾರಣ ಮುಂಬೈ. ಬಹುಶಃ ನನ್ನ ಹೇಳಿಕೆಗಳನ್ನು ತಪ್ಪರ್ಥೈಸಿಕೊಳ್ಳಲಾಗಿದೆ ಎಂದರು.
ಇಂಡಿಯನ್ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿಗಾಗಿನ ಆಟಗಾರರ ಹರಾಜಿನಲ್ಲಿ ಪಾಕಿಸ್ತಾನದ ಆಟಗಾರರನ್ನು ಕೈ ಬಿಟ್ಟದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಶಾರೂಖ್, ಕಾನೂನಿನ ಅಡೆತಡೆಗಳು ಇಲ್ಲದೇ ಇರುವಾಗ ಪಕ್ಕದ ದೇಶದ ಆಟಗಾರರನ್ನು ಆರಿಸಿಕೊಳ್ಳದೇ ಇದ್ದದ್ದು ನಿರಾಸೆ ತಂದಿದೆ. ನನ್ನ ತಂಡದಲ್ಲೇನಾದರೂ ಖಾಲಿ ಜಾಗ ಇದ್ದಿದ್ದರೆ ನಾನು ಅವರನ್ನು ಆಯ್ಕೆ ಮಾಡುತ್ತಿದ್ದೆ ಎಂದಿದ್ದರು.
ಇದಕ್ಕೆ ತೀವ್ರ ಆಕ್ರೋಶವ್ಯಕ್ತಪಡಿಸಿದ್ದ ಶಿವಸೇನೆ, ಶಾರೂಖ್ ಓರ್ವ ರಾಷ್ಟ್ರದ್ರೋಹಿ ಎಂದು ಜರೆದಿತ್ತು. ಪಾಕಿಸ್ತಾನ ಪರ ಮಾತನಾಡುವ ಅವರು ಪಾಕಿಸ್ತಾನಕ್ಕೇ ಹೋಗಬೇಕು ಎಂದು ಕರಾಚಿಗೆ ಪ್ರಯಾಣಿಸುವ ಟಿಕೆಟನ್ನು ಕೂಡ ಶಿವಸೇನೆ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದ ದಿನ ಪ್ರದರ್ಶಿಸಿತ್ತು.