ಕೈಗಳು ಕತ್ತರಿಸಿ ಹೋದ್ರೂ ಸರಿ, ಗೋಹತ್ಯೆಗೆ ಬಿಡಲ್ಲ: ವರುಣ್ ಗಾಂಧಿ
ಲಕ್ನೋ, ಭಾನುವಾರ, 7 ಫೆಬ್ರವರಿ 2010( 15:25 IST )
ಲಕ್ನೋ: ಕೇಂದ್ರ ಆಹಾರ ಮತ್ತು ಕೃಷಿ ಸಚಿವ ಶರದ್ ಪವಾರ್ ಅವರನ್ನು 'ರಾವಣ'ನಿಗೆ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿಯವರನ್ನು ಆತನ ಸಹೋದರಿ 'ಶೂರ್ಪನಖಿ' ಹೋಲಿಸಿರುವ ಬಿಜೆಪಿ ಮುಖಂಡ ವರುಣ್ ಗಾಂಧಿ, ಎಲ್ಲಾದರೂ ಗೋಹತ್ಯೆ ಯತ್ನ ನಡೆಯುತ್ತಿದ್ದರೆ ನನ್ನನ್ನು ಕರೆಯಿರಿ; ನಮ್ಮ ಕೈಗಳು ಕತ್ತರಿಸಿ ಹೋದರೂ ಸರಿಯೇ, ಆದರೆ ನಮ್ಮ ಒಂದೇ ಒಂದು ಗೋವನ್ನು ಕೊಲ್ಲಲು ಅವಕಾಶ ನೀಡುವುದಿಲ್ಲ ಎಂದು ಹೇಳುವ ಮೂಲಕ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ.
ನಮ್ಮ ದೇಶದಲ್ಲಿನ ಹಣದುಬ್ಬರಕ್ಕೆ ಸಹೋದರ-ಸಹೋದರಿ ಜೋಡಿಯೇ ಹೊಣೆಗಾರರು. ಸಹೋದರ ರಾವಣ ಸಚಿವನಾಗಿದ್ದುಕೊಂಡು ದೆಹಲಿಯಲ್ಲಿದ್ದರೆ, ಆತನ ಸಹೋದರಿ ಮುಖ್ಯಮಂತ್ರಿಯಾಗಿದ್ದುಕೊಂಡು ಲಕ್ನೋದಲ್ಲಿದ್ದಾರೆ ಎಂದು ಬುಲಂದ್‌ಶಹರ್ ಜಿಲ್ಲೆಯ ಶಿಕಾರ್ಪುರ್ ನಗರದಲ್ಲಿ ಸಮಾವೇಶವೊಂದನ್ನು ಉದ್ದೇಶಿಸಿ ವರುಣ್ ಟೀಕಿಸಿದ್ದಾರೆ.
ಈ ಇಬ್ಬರು ದೇಶದ ಹಣದುಬ್ಬರ ಆವಾಂತರಕ್ಕೆ ಪ್ರಮುಖ ಕಾರಣರು ಎಂದು ಆರೋಪಿಸಿರುವ ವರುಣ್, ಇಬ್ಬರ ಪರಸ್ಪರ ಆರೋಪಗಳ ಕೆಸರನ್ನೆರಚಿಕೊಳ್ಳುವ ತೆವಲಿನ ದುಷ್ಪರಿಣಾಮ ಹಣದುಬ್ಬರದ ಮೇಲಾಗುತ್ತಿದೆ ಎಂದರು.
PTI
ಕೈ ಹೋದ್ರೂ ಸರಿ, ಗೋಹತ್ಯೆಗೆ ಬಿಡಲ್ಲ... ಬೆಲೆಯೇರಿಕೆಯೊಂದು ಸಮಸ್ಯೆ ಎಂಬುದನ್ನು ನಾವು ಪರಿಗಣಿಸೋಣ. ಆದರೆ ಅದೇ ಹೊತ್ತಿಗೆ ನಮ್ಮ ಪಕ್ಷವನ್ನು ಯಾಕೆ ಸ್ಥಾಪಿಸಲಾಗಿತ್ತು ಎಂಬುದನ್ನು ನಾವು ಮರೆಯಬಾರದು. ನಾವು ನಮ್ಮ ಸ್ವಾಭಿಮಾನಕ್ಕಾಗಿ, ಆತ್ಮಗೌರವಕ್ಕಾಗಿ ಹೋರಾಡದಿದ್ದರೆ ಗಂಗೆ (ನದಿ), ಗೋ ಮಾತೆ, ನಮ್ಮ ದೇವಸ್ಥಾನಗಳು ಮತ್ತು ಯುವ ಜನತೆ ಸೇರಿದಂತೆ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ವರುಣ್ ಗಾಂಧಿ ಅಭಿಪ್ರಾಯಪಟ್ಟರು.
ನಾನಿಲ್ಲಿಗೆ ಬಂದಿದ್ದಾಗ ದಾರಿಯಲ್ಲಿ ಹಲವು ಮಿನಾರ್‌ಗಳನ್ನು ನೋಡಿದೆ. ಇದರಿಂದ ನನಗೇನೂ ಸಮಸ್ಯೆಯಿಲ್ಲ. ಆದರೆ ನಮ್ಮ ದೇವಸ್ಥಾನಗಳ ಇಂದಿನ ಕೆಟ್ಟ ಸ್ಥಿತಿ ನನಗೆ ತೀರಾ ಖೇದ ಹುಟ್ಟಿಸಿತು. ಅವು ನಮ್ಮ ನಂಬಿಕೆಯ ಸಂಕೇತ. ಅವುಗಳ ರಕ್ಷಣೆಗಾಗಿ ನಾವು ಏನಾದರೂ ಮಾಡಲೇಬೇಕು. ನಾನು ಫಿಲಿಬಿತ್ ಕ್ಷೇತ್ರದಲ್ಲಿ ನನ್ನ ಸ್ವಂತ ಖರ್ಚಿನಲ್ಲಿ 200ರಷ್ಟು ದೇವಸ್ಥಾನಗಳನ್ನು ನಿರ್ಮಾಣ ಮಾಡಿರುವುದಾಗಿ ತಿಳಿಸಿದರು.
'ಜೈ ಶ್ರೀ ರಾಮ್' ಎಂಬ ಘೋಷಣೆಗಳು ಕೇಳಿ ಬರುತ್ತಿದ್ದಂತೆ ಪ್ರಚೋದಿತರಾದ ಗಾಂಧಿ, ಇಲ್ಲಿ ಯಾವುದೇ ಕಾರಣಕ್ಕೂ ಗೋಹತ್ಯೆ ನಡೆಯಕೂಡದು. ಹಾಗೆಲ್ಲಾದರೂ ನಡೆಯುವ ಸಾಧ್ಯತೆಗಳಿದ್ದಲ್ಲಿ ಯಾವುದೇ ಸಂದರ್ಭದಲ್ಲಾದರೂ ನನ್ನನ್ನು ಕರೆಯಿರಿ, ನಾನು ಸ್ಥಳಕ್ಕೆ ಬರುತ್ತೇನೆ. ನಮ್ಮ ಕೈಗಳನ್ನು ಕತ್ತರಿಸಿದರೂ ಸರಿಯೇ, ಆದರೆ ಒಂದೇ ಒಂದು ಗೋವನ್ನು ಹತ್ಯೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಗುಡುಗಿದರು.
ವರುಣ್ ಗಾಂಧಿಯವರ ಟೀಕೆಗಳನ್ನು ರಾಜ್ಯ ಬಿಜೆಪಿ ಘಟಕವು ಅನಿರೀಕ್ಷಿತ ಆಘಾತವೆಂದು ಒಪ್ಪಿಕೊಂಡಿದೆ. ಲಕ್ನೋದ ಬಿಜೆಪಿ ಹಿರಿಯ ನಾಯಕರು ತೀರಾ ಕಳಪೆ ಭಾಷೆ ಬಳಸಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ರಾದ್ದಾಂತವೊಂದರಲ್ಲಿ ಎನ್‌ಎಸ್‌ಎ ಕಾಯ್ದೆಯಡಿಯಲ್ಲಿ ಪ್ರಕರಣ ಎದುರಿಸುತ್ತಿರುವ ವರುಣ್ ನ್ಯಾಯಾಲಯದ ಹೋರಾಟ ಇನ್ನೂ ಮುಗಿದಿಲ್ಲ. ಅವರಿಂದ ಇಂತಹ ಆಕ್ರೋಶಭರಿತ ಭಾಷೆಯನ್ನು ನಾವು ನಿರೀಕ್ಷೀಸಿರಲಿಲ್ಲ ಎಂದು ಹಿರಿಯ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ವರುಣ್ ಗಾಂಧಿಯವರನ್ನು ಬಂಧಿಸಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.