ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕ್ ಭಯೋತ್ಪಾದಕರನ್ನು ಮಣ್ಣು ಮುಕ್ಕಿಸುತ್ತೇವೆ: ಚಿದಂಬರಂ
(Pak-based terror groups | India | P Chidambaram | Lashkar-e-Taiba)
ದೇಶವನ್ನು ನಿಷ್ಕರುಣೆಯಿಂದ ವಿರೋಧಿಸುತ್ತಿರುವ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳನ್ನು 'ಅಂಧಕಾರದ ಶಕ್ತಿಗಳು' ಎಂದು ಬಣ್ಣಿಸಿರುವ ಭಾರತ, ಅವುಗಳು ಎದುರಾದಾಗಲೆಲ್ಲ ನಮ್ಮ ಪಡೆಗಳಿಂದ ಪರಾಜಯ ಅನುಭವಿಸಲಿವೆ ಎಂದು ಗೃಹಸಚಿವ ಪಿ. ಚಿದಂಬರಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿನ ಅಸಂಖ್ಯಾತ ಭಯೋತ್ಪಾದಕ ದಾಳಿಗಳಿಗೆ ಕಾರಣವಾಗಿರುವ ಲಷ್ಕರ್ ಇ ತೋಯ್ಬಾ ಮತ್ತು ಹಿಜ್ಬುಲ್ ಮುಜಾಹಿದೀನ್ ಮುಂತಾದ ಉಗ್ರ ಸಂಘಟನೆಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮುಜಾಫರಾಬಾದ್‌ನಲ್ಲಿ ಗುರುವಾರ ಸಭೆ ಸೇರಿದ್ದು, ಭಾರತವನ್ನು ನಿರ್ದಯವಾಗಿ ವಿರೋಧಿಸಿರುವುದು ಸ್ಪಷ್ಟವಾಗಿದೆ ಎಂದರು.
ಪಾಕಿಸ್ತಾನ ವಶದಲ್ಲಿರುವ ಕಾಶ್ಮೀರದಲ್ಲಿ ಸಭೆ ಸೇರಿದ್ದ ಭಯೋತ್ಪಾದಕ ಗುಂಪುಗಳು ಭಾರತ ವಶದಲ್ಲಿರುವ ಕಾಶ್ಮೀರದಲ್ಲಿ ಜಿಹಾದ್ ಮುಂದುವರಿಸುವುವುದು ಮತ್ತು ಭಾರತದ ವಿರುದ್ಧ ಹೋರಾಟ ಮಾಡುವ ನಿರ್ಧಾರವನ್ನು ಕೈಗೊಂಡಿವೆ ಎಂದು ಮಾಧ್ಯಮ ವರದಿಗಳು ತಿಳಿಸಿದ್ದವು.
ಬಲವಂತವಾಗಿ ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಗುರಿ ಹೊಂದಿರುವ ಅವರ ಮಾರ್ಗಗಳು ಕೇಡುಂಟು ಮಾಡುವುದು ಮತ್ತು ಹಿಂಸಾಚಾರ. ಈ 'ಅಂಧಕಾರದ ಪಡೆಗಳು' ರೂಪಿಸಿರುವ ತಂತ್ರಗಳು ಯಶಸ್ಸು ಕಾಣುವುದಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತಿದ್ದೇನೆ. ಅವರು ಎಲ್ಲೆಲ್ಲ ಮತ್ತು ಯಾವಾಗ ಮುಖಾಮುಖಿಯಾದರೂ ಅವರನ್ನು ಸೋಲಿಸುತ್ತೇವೆ ಎಂದು ನವದೆಹಲಿಯಲ್ಲಿ ನಡೆದ ಆಂತರಿಕ ಭದ್ರತೆ ಕುರಿತ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ತನ್ನ ಆರಂಭಿಕ ಹೇಳಿಕೆಯಲ್ಲಿ ಚಿದಂಬರಂ ತಿಳಿಸಿದ್ದಾರೆ.
ಕಳೆದ 14 ತಿಂಗಳುಗಳಲ್ಲಿ ದೇಶದಲ್ಲಿ ಯಾವುದೇ ದೊಡ್ಡ ಭಯೋತ್ಪಾದನಾ ದಾಳಿ ಮತ್ತು ಪ್ರಮುಖ ಕೋಮುಗಲಭೆಗಳು ನಡೆಯದೇ ಇರುವುದು ಸಮಾಧಾನದ ಸಂಗತಿ. ಹಾಗೆಂದು ದೇಶದ ಮೇಲೆ ಯಾವುದೇ ಭಯೋತ್ಪಾದನಾ ದಾಳಿಗಳು ನಡೆಯಲಾಗದು ಎಂದು ಅರ್ಥವಲ್ಲ ಎಂದರು.
ನಮ್ಮಲ್ಲಿ ಯಾವುದೇ ಕೋಮುಗಲಭೆಗಳು ನಡೆಯುತ್ತಿಲ್ಲ ಅಥವಾ ಭಯೋತ್ಪಾದನಾ ದಾಳಿಗಳು ನಡೆಯುವುದಿಲ್ಲ ಅಥವಾ ಕೋಮು ಅಶಾಂತಿಗೆ ಯಾರೂ ಪ್ರಚೋದನೆ ನೀಡುತ್ತಿಲ್ಲ ಎಂದು ಹೇಳುವುದು ತೀರಾ ಅವಸರದ ಹೇಳಿಕೆಯಾಗಬಹುದು ಎಂದು ಸಚಿವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
ನಾವು ಯಾವತ್ತೂ ಎಚ್ಚರಿಕೆಯಿಂದಲೇ ಉಳಿಯಬೇಕು. ಸಾಮರ್ಥ್ಯವನ್ನು ವೃದ್ಧಿಸುವ ಕಾರ್ಯವನ್ನು ನಾವು ಮುಂದುವರಿಸಲೇಬೇಕು. ಅಲ್ಲದೆ ಭಯೋತ್ಪಾದನಾ ದಾಳಿಗಳನ್ನು ವಿಫಲಗೊಳಿಸಲು ಮತ್ತು ಕೋಮು ಸಂಘರ್ಷಗಳನ್ನು ತಡೆಗಟ್ಟಲು ನಾವು ನಮ್ಮ ಕಾರ್ಯನೀತಿಗಳನ್ನು ಮತ್ತು ಆಡಳಿತ ವ್ಯವಸ್ಥೆಯನ್ನು ಉತ್ತಮಗೊಳಿಸಬೇಕು ಎಂದರು.