ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಜೆಪಿ, ಕಾಂಗ್ರೆಸ್ ದಾಳಿಗೆ ಯೋಜಿಸಿದ್ದ ಇಂಡಿಯನ್ ಮುಜಾಹಿದೀನ್
(Indian Mujahideen | IIT Delhi | BJP | Lashkar-e-Taiba)
ಬಿಜೆಪಿ, ಕಾಂಗ್ರೆಸ್ ದಾಳಿಗೆ ಯೋಜಿಸಿದ್ದ ಇಂಡಿಯನ್ ಮುಜಾಹಿದೀನ್
ನವದೆಹಲಿ, ಸೋಮವಾರ, 8 ಫೆಬ್ರವರಿ 2010( 08:37 IST )
2008ರ ಸೆಪ್ಟೆಂಬರ್‌ನ ಸರಣಿ ಸ್ಫೋಟಗಳ ನಂತರ ಕಾಂಗ್ರೆಸ್, ಬಿಜೆಪಿ ಪ್ರಧಾನ ಕಚೇರಿಗಳು ಹಾಗೂ ದೆಹಲಿ ಐಐಟಿ ಮೇಲೆ ದಾಳಿ ನಡೆಸಲು ಲಷ್ಕರ್ ಇ ತೋಯ್ಬಾ ಕೃಪಾಪೋಷಿತ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದೀನ್ ಯೋಜನೆ ರೂಪಿಸಿತ್ತು ಎಂದು ಭಯಾನಕ ಸತ್ಯ ಹೊರಬಿದ್ದಿದೆ.
ಉತ್ತರ ಪ್ರದೇಶದ ಅಜಂಗಢದಲ್ಲಿ ಬಂಧಿತನಾದ ಉಗ್ರ ಶಾಹ್ಜಾದ್ ಆಲಿಯಾಸ್ ಪಪ್ಪು ವಿಚಾರಣೆಯ ನಂತರ ಇಂಡಿಯನ್ ಮುಜಾಹಿದೀನ್ ಕುತಂತ್ರಗಳು ಬಯಲಿಗೆ ಬಂದಿವೆ ಎಂದು ದೆಹಲಿ ಪೊಲೀಸ್ ಮೂಲಗಳು ಭಾನುವಾರ ತಿಳಿಸಿವೆ.
ಪ್ರಮುಖ ಕಟ್ಟಡಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಪ್ರಧಾನ ಕಚೇರಿಗಳು ಹಾಗೂ ರಾಜಧಾನಿಯಲ್ಲಿನ ಐಐಟಿ ಕ್ಯಾಂಪಸ್ಸಿಗೆ ದಾಳಿ ನಡೆಸುವ ಕರಾಳ ಯೋಜನೆಯೊಂದನ್ನು ಇಂಡಿಯನ್ ಮುಜಾಹಿದೀನ್ ರೂಪಿಸಿತ್ತು.
ಬಾಟ್ಲಾ ಹೌಸ್ ಎನ್‌ಕೌಂಟರ್ ಬಳಿಕ ಪರಾರಿಯಾದ ಬಳಿಕ ಶಾಹ್ಜಾದ್ ಭಯೋತ್ಪಾದಕ ಸಂಘಟನೆಗಳ ನಾಲ್ಕು ಮಂದಿಯ ಜತೆ ಇಂಟರ್ನೆಟ್‌ನಲ್ಲಿ ಸಂಪರ್ಕ ಹೊಂದಿದ್ದ ಎಂದೂ ದೆಹಲಿ ಪೊಲೀಸರು ತಿಳಿಸಿದ್ದಾರೆ.
ದೆಹಲಿ ಸರಣಿ ಸ್ಫೋಟದಲ್ಲಿ 26 ಮಂದಿ ಸಾವನ್ನಪ್ಪಿದ ವಾರದ ಬಳಿಕ 2008ರ ಸೆಪ್ಟೆಂಬರ್ 19ರಂದು ನಡೆಸಲಾದ ಬಾಟ್ಲಾ ಹೌಸ್ ಎನ್‌ಕೌಂಟರ್‌ನಲ್ಲಿ ಇನ್ಸ್‌ಪೆಕ್ಟರ್ ಎಂ.ಸಿ. ಶರ್ಮಾ ಅವರನ್ನು ಕೊಂದು ಹಾಕಿರುವುದು ನಾನೇ ಎಂದು ಶಾಹ್ಜಾದ್ ತಪ್ಪೊಪ್ಪಿಕೊಂಡಿದ್ದಾನೆ ಎಂದೂ ತನಿಖಾ ದಳಗಳು ವಿವರಿಸಿವೆ.
ಬಾಟ್ಲಾ ಹೌಸ್‌ನಿಂದ ಪರಾರಿರಾಯದ ಬಳಿಕ ಆತ ಮೊದಲು ಹೋದದ್ದು ಮಾಜಿ ಶಾಸಕ ಎಂದು ಹೇಳಲಾಗಿರುವ ಉತ್ತರ ಪ್ರದೇಶದ ರಾಜಕಾರಣಿಯೊಬ್ಬರ ಶಹೀನ್‌ಬಾಗ್‌ನಲ್ಲಿನ ಮನೆಗೆ. ಅಲ್ಲಿ ರಾಜಕಾರಣಿ ಉಗ್ರನಿಗೆ ಆರ್ಥಿಕ ಸಹಾಯ ಮಾಡಿದ್ದ ಎಂದು ಈ ಹಿಂದೆಯೇ ಪೊಲೀಸರಲ್ಲಿ ಶಾಹ್ಜಾದ್ ಬಾಯ್ಬಿಟ್ಟಿದ್ದ.
ಶಹೀನ್‌ಬಾಗ್‌ನಿಂದ ಶಾಹ್ಜಾದ್, ಜುನೈದ್ ಮತ್ತು ಬಾಟ್ಲಾದಿಂದ ಪರಾರಿಯಾದವರ ಎನ್ನಲಾಗಿರುವ ಇನ್ನೊಬ್ಬ ವ್ಯಕ್ತಿ ಆಲಿಗಢಕ್ಕೆ ತೆರಳಿದ್ದರು. ಆ ನಂತರ ಆತ ಮುಂಬೈಗೆ ತೆರಳಿ ತನ್ನೂರಿಗೆ ಹೋಗಿ ಅಡಗಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.