ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯುಪಿಎ ಪದ್ಮ 'ವಿಜೇತ'ನನ್ನು ನಿರ್ಲಕ್ಷಿಸಿದ್ದರು ಅಟಲ್, ಗುಜ್ರಾಲ್!
(UPA government | Sant Singh Chatwal | Atal Behari Vajpayee | IK Gujral)
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಪದ್ಮಭೂಷಣ 'ವಿಜೇತ' ಕಳಂಕಿತ ಉದ್ಯಮಿ ಸಂತಾ ಸಿಂಗ್ ಛತ್ವಾಲ್‌ರನ್ನು ಈ ಹಿಂದೆ ಅಂದಿನ ಪ್ರಧಾನಿಗಳಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಮತ್ತು ಐ.ಕೆ. ಗುಜ್ರಾಲ್ ತಮ್ಮ ಅಮೆರಿಕಾ ಭೇಟಿಗಳ ಸಂದರ್ಭದಲ್ಲಿ ಉಪೇಕ್ಷಿಸಲು ಯತ್ನಿಸಿದ್ದರು ಎಂಬ ಕುತೂಹಲಕಾರಿ ಅಂಶಗಳು ಬಯಲಾಗಿವೆ.
ಇನ್ನೂ ಇತ್ಯರ್ಥವಾಗದ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಅನಿವಾಸಿ ಭಾರತೀಯ ಹೊಟೇಲ್ ಉದ್ಯಮಿ ಛತ್ವಾಲ್‌ರಿಗೆ ಪದ್ಮಭೂಷಣ ಪ್ರಶಸ್ತಿ ಪ್ರಕಟಿಸಿರುವ ಕೇಂದ್ರ ಸರಕಾರ, ಅಮೆರಿಕಾದಲ್ಲಿ ಭಾರತದ ಹಿತಾಸಕ್ತಿಯನ್ನು ರಕ್ಷಿಸಲು ಯತ್ನಿಸಿದ್ದಕ್ಕಾಗಿ ಗೌರವಿಸಲಾಗುತ್ತಿದೆ ಎಂದು ಟೀಕೆಗಳಿಗೆ ಉತ್ತರಿಸಿದೆ.
ಆದರೆ ಕೇಂದ್ರ ಸರಕಾರಗಳ ಇತಿಹಾಸವನ್ನು ಕೆದಕಿದಾಗ ಈ ಹಿಂದಿನ ಪ್ರಧಾನ ಮಂತ್ರಿಗಳು ಕಳಂಕಿತ ಉದ್ಯಮಿಯನ್ನು ಮುಖಾಮುಖಿಯಾಗುವ ಅವಕಾಶಗಳನ್ನು ತಪ್ಪಿಸಿಕೊಳ್ಳಲು ಯತ್ನಿಸಿದ್ದರು ಎಂದು ತಿಳಿದು ಬಂದಿದೆ.
ಅಮೆರಿಕಾ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಭಾರತಕ್ಕೆ 2000ದಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ಆಗಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಔತಣಕೂಟಕ್ಕಾಗಿ ಅತಿಥಿಗಳ ಪಟ್ಟಿಯನ್ನು ಅಂತಿಮಗೊಳಿಸುವಾಗ ಪಟ್ಟಿಯಲ್ಲಿ ಸೇರಿಕೊಂಡಿದ್ದ ಛತ್ವಾಲ್ ಹೆಸರನ್ನು ಕೈಬಿಟ್ಟಿದ್ದರು ಎಂದು ಮೂಲಗಳು ಹೇಳಿವೆ.
ಮತ್ತೊಬ್ಬ ಪ್ರಧಾನಿ ಗುಜ್ರಾಲ್ ಅಮೆರಿಕಾ ಭೇಟಿ ಸಂದರ್ಭದಲ್ಲಿ ಈಗ ಪದ್ಮ ಗೌರವಕ್ಕೆ ಸೂಚಿತಗೊಂಡಿರುವ ಛತ್ವಾಲ್ ಜತೆ ಭಾವಚಿತ್ರ ತೆಗೆಸಿಕೊಳ್ಳಲು ಇಷ್ಟಪಟ್ಟಿರಲಿಲ್ಲ.
1997ರಲ್ಲಿ ಅಮೆರಿಕಾ ಭೇಟಿ ನೀಡಿದ್ದ ಗುಜ್ರಾಲ್, ನ್ಯೂಯಾರ್ಕ್‌ನ ಪಂಜಾಬ್ ಅಸೋಸಿಯೇಷನ್ ಮನವಿಗೆ ಸ್ಪಂದಿಸಿ ಅದರ ಜನಪ್ರಿಯ ಸದಸ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲು ಒಪ್ಪಿಕೊಂಡಿದ್ದರು. ಆದರೆ ಅಮೆರಿಕಾ ಮತ್ತು ಭಾರತಗಳಲ್ಲಿ ಇತ್ಯರ್ಥವಾಗದಿರುವ ಪ್ರಕರಣಗಳನ್ನು ಹೊಂದಿರುವ ಛತ್ವಾಲ್ ಹೆಸರು ಕೂಡ ಪಟ್ಟಿಯಲ್ಲಿರುವುದನ್ನು ಅಧಿಕಾರಿಗಳು ಪ್ರಧಾನಿಯವರ ಗಮನ ಸೆಳೆದಿದ್ದರು.
ಈ ವಿಚಾರವನ್ನು ಕಾರ್ಯಕ್ರಮದ ಸಂಘಟಕರಿಗೆ ಗುಜ್ರಾಲ್ ಪ್ರಧಾನ ಕಾರ್ಯದರ್ಶಿ ತಿಳಿಸಿದ ನಂತರ, ಛತ್ವಾಲ್ ಹೆಸರನ್ನು ಪಟ್ಟಿಯಿಂದ ಕೈ ಬಿಡುವುದಾಗಿ ಪಂಜಾಬ್ ಅಸೋಸಿಯೇಷನ್ ಭರವಸೆ ನೀಡಿತ್ತು.
ಆದರೆ ಕಾರ್ಯಕ್ರಮಕ್ಕೆಂದು ಸ್ಥಳಕ್ಕೆ ಹೋದಾಗ ಪ್ರಧಾನಿ ಸೇರಿದಂತೆ ಅಧಿಕಾರಿಗಳಿಗೆ ಆಘಾತ ಕಾದಿತ್ತು. ಈ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಮತ್ತು ಸಂಘಟನೆ ನಡೆಯುತ್ತಿರುವುದೇ ಛತ್ವಾಲ್ ಸಹಕಾರದಿಂದ ಎಂಬುದು ತಿಳಿದು ಬಂತು. ಅಲ್ಲದೆ ಗುಜ್ರಾಲ್‌ರಿಂದ ಪ್ರಶಸ್ತಿ ಸ್ವೀಕರಿಸುವವರ ಪಟ್ಟಿಯಲ್ಲಿ ಛತ್ವಾಲ್ ಹೆಸರನ್ನೂ ಸೇರಿಸಲಾಗಿತ್ತು. ಈ ಸಂದರ್ಭದಲ್ಲಿ ತೀರಾ ಅವಮಾನಗೊಂಡ ಪ್ರಧಾನಿಗಳು ತೀವ್ರ ಅಸಮಾಧಾನಗೊಂಡರೂ ಮುಖದಲ್ಲಿ ಕಳೆಯಿಲ್ಲದೆ ಛತ್ವಾಲ್‌ರತ್ತ ನಗೆ ಬೀರಿದ್ದರು ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.
ತಕ್ಷಣವೇ ಕಾರ್ಯಕ್ರಮದಿಂದ ಹೊರ ನಡೆದ ಗುಜ್ರಾಲ್, ತಾನು ಈ ಹಿಂದೆ ಒಪ್ಪಿಕೊಂಡಿದ್ದ ಔತಣಕೂಟಕ್ಕೆ ಬರುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿ ಬಿಟ್ಟರು. ಮತ್ತೆ ಛತ್ವಾಲ್‌ರನ್ನು ಮುಖಾಮುಖಿಯಾಗುವುದು ಅವರಿಗೆ ಇಷ್ಟವಿರಲಿಲ್ಲ ಎಂದು ಹೇಳಲಾಗಿದೆ.