ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜ್ಯಗಳಲ್ಲಿ ಮಧ್ಯಪ್ರವೇಶಿಸುವ ಹಕ್ಕು ಕೇಂದ್ರಕ್ಕಿದೆ: ಸಚಿವ ಮೊಯ್ಲಿ
(Centre | intervene in state | Communal Violence Bill | Veerappa Moily)
ರಾಜ್ಯಗಳಲ್ಲಿ ಮಧ್ಯಪ್ರವೇಶಿಸುವ ಹಕ್ಕು ಕೇಂದ್ರಕ್ಕಿದೆ: ಸಚಿವ ಮೊಯ್ಲಿ
ನವದೆಹಲಿ, ಸೋಮವಾರ, 8 ಫೆಬ್ರವರಿ 2010( 13:31 IST )
ರಾಷ್ಟ್ರದಲ್ಲಿನ ಕೋಮು ಹಿಂಚಾಚಾರವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ನೇರ ಪ್ರವೇಶ ಮಾಡುವ ಸಾಂವಿಧಾನಿಕ ಹಕ್ಕನ್ನು ಹೊಂದಿದೆ ಎಂದು ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಪ್ರತಿಪಾದಿಸಿದ್ದಾರೆ.
ಸಂವಿಧಾನದ ಪರಿಚ್ಛೇದ 51ಸಿ ಅಡಿಯಲ್ಲಿ ಅಂತಾರಾಷ್ಟ್ರೀಯ ಮಾನವೀಯ ಕಾನೂನುಗಳ ಗೌರವ ರಕ್ಷಣೆ ಮತ್ತು ಬೆಂಬಲಿಸುವುದು ಕೇಂದ್ರ ಸರಕಾರದ ಮೂಲಭೂತ ಕರ್ತವ್ಯ ಎಂದು ಅವರು ಹೇಳಿದ್ದಾರೆ.
ಕಾನೂನು ತಜ್ಞರು, ನ್ಯಾಯಾಧೀಶರು, ಹೋರಾಟಗಾರರು ಮತ್ತು ವಕೀಲರುಗಳು ಸೇರಿದ್ದ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಮೊಯ್ಲಿ, ಸಂವಿಧಾನದ 355ನೇ ವಿಧಿಯ ಪ್ರಕಾರ ಯಾವುದೇ ರಾಜ್ಯಗಳಲ್ಲಿ ನಡೆಯುವ ಆಂತರಿಕ ಗಲಭೆಗಳಿಂದ ಪ್ರಜೆಗಳನ್ನು ರಕ್ಷಿಸುವುದು ಕೇಂದ್ರದ ಮೂಲಭೂತ ಸಂವಿಧಾನಿಕ ಕರ್ತವ್ಯ ಎಂದರು.
ಈ ಸಂಬಂಧ ಹೊಸತೊಂದು ರಾಷ್ಟ್ರೀಯ ಪ್ರಾಧಿಕಾರವನ್ನು ರಚಿಸುವ ಯೋಚನೆಯಲ್ಲಿರುವ ಕೇಂದ್ರವು ಅದಕ್ಕಾಗಿ ಶಾಸನವೊಂದನ್ನು ರೂಪಿಸಲಿದೆ. ಶಾಶ್ವತ ಹಾಗೂ ಸ್ವತಂತ್ರ ಅಂಗವಾಗಿ ಸ್ಥಾಪಿಸಲಾಗುವ ಇದರ ಮೇಲೆ ಕೇಂದ್ರ ಸರಕಾರವು ಯಾವುದೇ ನಿಯಂತ್ರಣ ಹೊಂದಿರುವುದಿಲ್ಲ.
ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸಲು ಯತ್ನಿಸುತ್ತಿರುವ ಕೇಂದ್ರವು ಈ ಸಂಬಂಧ ಶಾಸನವೊಂದನ್ನು ಜಾರಿ ಮಾಡಲು ಯತ್ನಿಸುತ್ತಿದ್ದು, ರಾಜ್ಯಗಳ ನಿಯಂತ್ರಣ ಕೇಂದ್ರಕ್ಕೂ ಸಿಗುವ ಬಗ್ಗೆ ಕಾನೂನು ರೂಪಿಸಲು ಸಂಸದರನ್ನು ಒಪ್ಪಿಸುವಂತೆ ಮಾನವ ಹಕ್ಕುಗಳ ಸಂಘಟನೆಗಳನ್ನು ಮೊಯ್ಲಿ ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.
2002ರ ಗುಜರಾತ್ ಕೋಮುಗಲಭೆ ಮತ್ತು 1993ರ ಮುಂಬೈ ಹಿಂಸಾಚಾರಗಳ ಸಂದರ್ಭಗಳಲ್ಲಿ ಕೇಂದ್ರ ಸರಕಾರವು ಮಧ್ಯ ಪ್ರವೇಶಿಸದೆ ಅಲ್ಪಸಂಖ್ಯಾತರ ಆಸ್ತಿ-ಪಾಸ್ತಿ ರಕ್ಷಿಸಲು ವಿಫಲವಾದ ಬಗ್ಗೆ ತೀವ್ರ ಟೀಕೆಗಳು ಕೇಳಿ ಬಂದಿದ್ದವು. ಅದಕ್ಕಾಗಿ ಪ್ರಸಕ್ತ ಕಾನೂನಿನಲ್ಲಿರುವ ದುರ್ಬಲತೆಯನ್ನು ಪರಿಷ್ಕರಿಸುವ ನೂತನ ಪ್ರಸ್ತಾವಿತ ಕಾಯ್ದೆ ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.