ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರುಚಿಕಾ ಲೈಂಗಿಕ ಕಿರುಕುಳ ಆರೋಪಿ ರಾಥೋಡ್ಗೆ ಇರಿತ
(Ruchika molestation case | Chandigarh court | Haryana DGP | SPS Rathore)
ರುಚಿಕಾ ಗಿರೋತ್ರಾ ಲೈಂಗಿಕ ಕಿರುಕುಳ ಆರೋಪಿ ಹರ್ಯಾಣದ ಮಾಜಿ ಡಿಜಿಪಿ ಎಸ್.ಪಿ.ಎಸ್. ರಾಥೋಡ್ ಚಂಡೀಗಢ ನ್ಯಾಯಾಲಯದ ಹೊರ ಆವರಣದಲ್ಲಿ ಯುವಕನೊಬ್ಬನಿಂದ ಚೂರಿ ಇರಿತಕ್ಕೊಳಗಾಗಿದ್ದಾರೆ.
ನ್ಯಾಯಾಲಯದಿಂದ ನಿರ್ಗಮಿಸುತ್ತಿದ್ದ ಸಂದರ್ಭದಲ್ಲಿ ಪತ್ರಕರ್ತನ ಸೋಗಿನಲ್ಲಿದ್ದ ಸುಮಾರು 25ರ ಹರೆಯದ ಉತ್ಸವ್ ಶರ್ಮಾ ಎಂಬ ಯುವಕ ಕೈಯಲ್ಲಿದ್ದ ಚೂರಿಯಿಂದ ಮೂರು ಬಾರಿ ಮುಖಕ್ಕೆ ಇರಿದಿದ್ದಾನೆ. ತಕ್ಷಣವೇ ರಾಥೋಡ್ ಅವರನ್ನು ಪಕ್ಕದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಣ್ಣ ಪ್ರಮಾಣದಲ್ಲಷ್ಟೇ ಗಾಯಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಮಾಧ್ಯಮ ವ್ಯಕ್ತಿಗಳು ರಾಥೋಡ್ ಅವರನ್ನು ಮಾತನಾಡಿಸುತ್ತಿರುವಂತೆ ದಾಳಿ ನಡೆಸಿದ ಯುವಕ ಸತತ ಮೂರು ಬಾರಿ ರಾಥೋಡ್ ಅವರ ಮುಖಕ್ಕೆ ಇರಿದ ಎಂದು ವೀಡಿಯೋ ಸಹಿತ ವರದಿ ಮಾಡಿರುವ ವಾರ್ತಾವಾಹಿನಿಗಳು ತಿಳಿಸಿವೆ.
ಲೈಂಗಿಕ ಕಿರುಕುಳದ ಆರೋಪಿ ಮೇಲೆ ದಾಳಿ ಮಾಡಿದವನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈತ ಉತ್ತರ ಪ್ರದೇಶದ ವಾರಣಾಸಿ ಮೂಲದವನಾಗಿದ್ದು, ಅಹಮದಾಬಾದ್ನಲ್ಲಿ ಸಿನಿಮಾ ನಿರ್ಮಾಣ ಕುರಿತು ಅಧ್ಯಯನ ನಡೆಸುತ್ತಿದ್ದೇನೆ ಮತ್ತು ರುಚಿಕಾ ಲೈಂಗಿಕ ಕಿರುಕುಳದ ಬಗ್ಗೆ ಪುಸ್ತಕವೊಂದನ್ನು ಬರೆಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
14ರ ಹರೆಯದ ರುಚಿಕಾಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪವನ್ನು ರಾಥೋಡ್ ಮೇಲೆ ಹೊರಿಸಲಾಗಿದ್ದು, ಆಕೆ ಮೂರು ವರ್ಷದ ನಂತರ 90ರ ದಶಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಸಂಬಂಧ ಆರೋಪಿಯೆಂದು ಸಾಬೀತಾಗಿದ್ದ ರಾಥೋಡ್ ಮೇಲೆ ಕನಿಷ್ಠ ಶಿಕ್ಷೆಯನ್ನು ನ್ಯಾಯಾಲಯ ಪ್ರಕಟಿಸಿದ ಹಿನ್ನೆಲೆಯಲ್ಲಿ ಮತ್ತೆ ಹೊಸ ಪ್ರಕರಣಗಳನ್ನು ದಾಖಲು ಮಾಡಿ ತನಿಖೆ ನಡೆಸಲಾಗುತ್ತಿದೆ.